ಪತ್ನಿಯನ್ನು ಕಾಪಾಡಲು ಹೋದ ಬಳ್ಳಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇನ್ನಿಲ್ಲ: ಸಾವಲ್ಲೂ ಒಂದಾದ ದಂಪತಿ!

bellary
Published on

ಬಳ್ಳಾರಿ: ಪತ್ನಿಯ ಜೀವ ಉಳಿಸಲು ಹೋಗಿ ಬಳ್ಳಾರಿಯ ಕೌಲ್‌ ಬಜಾರ್‌ನ ಬಂಡಿಹಟ್ಟಿಯ ಮನೆಯ ನಿವಾಸಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಘಟನೆಯಲ್ಲಿ ಪತ್ನಿ ದ್ಯಾವಮ್ಮ ಅವರೂ ಮೃತಪಟ್ಟಿದ್ದಾರೆ.


ಮನೆಯ ಮೇಲೆ ನಿಂತಿದ್ದ ಮಳೆ ನೀರನ್ನು ಕೆಳಕ್ಕೆ ಚೆಲ್ಲಲು ದ್ಯಾವಮ್ಮನವರು ಹೋಗಿದ್ದರು. ಈ ಸಂದರ್ಭದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದಾರೆ, ಅವರಿಗೆ ಶಾಕ್​ ಹೊಡೆದಿದೆ. ಈ ವೇಳೆ ಪತ್ನಿಯನ್ನು ರಕ್ಷಿಸಲು ಹೋಗಿದ್ದರು ಪಂಪಾಪತಿ. ಈ ವೇಳೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ. ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ.

ಪಂಪಾಪತಿ ಅವರು ಬಯಲಾಟ ಕಲಾವಿದರಾಗಿದ್ದರು, ಎರಡು ಸಾವಿರಕ್ಕೂ ಅಧಿಕ ಬಯಲಾಟ ಪ್ರದರ್ಶನಗಳನ್ನು ಇವರು ನೀಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಇವರಿಗೆ 2018ರಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಬಯಲಾಟ ಕಲಾವಿದರಾಗಿ ಹಲವು ದಶಕಗಳ ಕಾಲ ಸಾರಥಿ ಪಾತ್ರವನ್ನು ಅಭಿನಯಿಸಿದ್ದರಿಂದ ಇವರಿಗೆ ಸಾರಥಿ ಪಂಪಾಪತಿ ಎಂದೇ ಜನರು ಗುರುತಿಸುತ್ತಿದ್ದರು.

ಪಂಪಾಪತಿ ಅವರಿಗೆ 68 ಹಾಗೂ ದ್ಯಾವಮ್ಮಾ ಅವರಿಗೆ 65 ವರ್ಷ ವಯಸ್ಸಾಗಿತ್ತು. ಇವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಘಟನೆ ಸಂಬಂಧಿಸಿ ಕೌಲ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net