ಕಳ್ಳತನ ಮಾಡಲು ಬೆತ್ತಲಾಗಿ ಹೋಗ್ತಿದ್ದ, ಹೊರಗೆ ಹೆಂಡ್ತಿ ಕಾಯ್ತಿದ್ಲು! ಬಾಗಲಕೋಟೆ ಖತರ್ನಾಕ್‌ ದಂಪತಿ ಅರೆಸ್ಟ್‌

theif
Published on

ಬಾಗಲಕೋಟೆ: ಮೈಗೆ ಎಣ್ಣೆ ಬಳಿದುಕೊಂಡು ಬೆತ್ತಲಾಗಿ ಕಳ್ಳತನ ಮಾಡುವಲ್ಲಿ ನಿಸ್ಸೀಮನಾಗಿರುವ ವ್ಯಕ್ತಿ ಹಾಗೂ ಆತನಿಗೆ ಸಹಾಯ ಮಾಡುತ್ತಿದ್ದ ಹೆಂಡತಿ ಇಬ್ಬರನ್ನೂ ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ. ಹಲವಾರು ಮನೆಗಳಲ್ಲಿ ಜಾಣತನದಿಂದ ಕಳ್ಳತನ ಮಾಡಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನುತ್ತಿದ್ದ ಸುರೇಶ್ ಶಿವಪೂರೆ ಮತ್ತು ಬಸಮ್ಮ ಸುರೇಶ್ ಶಿವಪೂರೆ ಕೊನೆಗೂ ಸಿಕ್ಕಿಬಿದ್ದಿದ್ದಾರೆ.

ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ಮಾಡುತ್ತಿರುವುದು ಕಂಡುಬಂದಿದೆ. ಕೆಲ ದಿನಗಳಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆಲ ಭಾಗಗಳಲ್ಲಿ ಹಲವಾರು ಮಂದಿಯ ಮನೆಯಲ್ಲಿ ಕಳ್ಳತನವಾಗಿದ್ದವು. ಕಳ್ಳರು ಮಾತ್ರ ತಪ್ಪಿಸಿಕೊಳ್ಳುತ್ತಿದ್ದರು. ಇವರ ಬೇಟೆಗೆ ಪೊಲೀಸರು ಭಾರಿ ಜಾಲ ಬೀಸಿದ್ದರು.

ಬಾದಾಮಿ ಪೊಲೀಸ್ ಸಿಪಿಐ ರಮೇಶ್ ಹಾನಾಪೂರ ನೇತೃತ್ವದಲ್ಲಿ ಕಳ್ಳರಿಗಾಗಿ ಬಲೆ ಬೀಸಲಾಗಿತ್ತು. ಕೊನೆಗೂ ಖದೀಮರು ಸಿಕ್ಕಿಬಿದ್ದಿದ್ದಾರೆ. ಈ ದಂಪತಿಯಿಂದ ಹತ್ತೂವರೆ ಲಕ್ಷ ಮೌಲ್ಯದ ಚಿನ್ನಾಭರಣ, 15 ಸಾವಿರ ರೂ. ಬೆಲೆಬಾಳುವ ಬೆಳ್ಳಿ ಆಭರಣ, ಕಳ್ಳತನಕ್ಕೆ ಬಳಸುತ್ತಿದ್ದ ಮೋಟರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಸದ್ಯ ಇವರ ವಿರುದ್ಧ 46 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಈ ವ್ಯಕ್ತಿ ಬೆತ್ತಲಾಗಿ ಎಣ್ಣೆ ಬಳಿದುಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ. ಯಾರೂ ಇಲ್ಲದ ಮನೆಯೇ ಇವರ ಟಾರ್ಗೆಟ್‌ ಆಗಿತ್ತು. ಜನರು ಹಿಡಿಯಲು ಬಂದರೆ ಅವರಿಗೆ ಸಿಗಬಾರದು ಎನ್ನುವ ಉದ್ದೇಶದಿಂದ ಎಣ್ಣೆ ಬಳಿದುಕೊಳ್ಳಲಾಗುತ್ತಿತ್ತು. ಹಿಡಿಯಲು ಬರುವವರ ಕೈಜಾರಿ ಹೋಗುವ ಕಾರಣ ಸುಲಭದಲ್ಲಿ ತಪ್ಪಿಸಿಕೊಳ್ಳಬಹುದು ಎಂದು. ಈತ ಒಳಗೆ ಕಳ್ಳತನ ಮಾಡುತ್ತಿದ್ದರೆ, ಪತ್ನಿ ಹೊರಗೆ ನಿಂತು ಯಾರಾದರೂ ಬರುತ್ತಾರೋ ಗಮನಿಸುತ್ತಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net