‘ಪ್ಲೀಸ್‌ ಅರ್ಜೆಂಟ್‌ 15 ಸಾವಿರ ರೂ. ಬೇಕು, ಕೊಡುವಿರಾ?’ ಶಾಸಕ ಆಯನೂರು ಮೆಸೇಜ್‌ ಓದಿದವರು ಶಾಕ್‌!

Ayanuru
Published on

ಶಿವಮೊಗ್ಗ: ಪ್ಲೀಸ್‌ ಅರ್ಜೆಂಟ್‌ 15 ಸಾವಿರ ರೂ. ಬೇಕು, ನನಗೆ ದುಡ್ಡು ಹಾಕಿದರೆ, ಎರಡು ಗಂಟೆಯ ಒಳಗೆ ವಾಪಸ್‌ ಮಾಡುವೆ’ ಎಂದು ಶಿವಮೊಗ್ಗದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಹೆಸರಿನಲ್ಲಿ ಮೆಸೇಜ್‌ ಬಂದದ್ದನ್ನು ನೋಡಿ ಅವರ ಪರಿಚಯಸ್ಥರು ಶಾಕ್‌ ಆಗಿರುವ ಘಟನೆ ನಡೆದಿದೆ.

15 ಸಾವಿರ ರೂಪಾಯಿಯನ್ನು ಕೂಡಲೇ ಗೂಗಲ್‌ ಪೇ, ಫೋನ್ ಪೇ ಅಥವಾ ಪೇಟಿಎಂ ಮೂಲಕ ನೀಡಿದರೆ ಎರಡು ಗಂಟೆಯ ಒಳಗೆ ನೀಡುವುದಾಗಿ ಆ ಮೆಸೇಜ್‌ನಲ್ಲಿ ಬಂದಿದೆ. ಇದನ್ನು ಓದಿದ ಕೆಲವರು ಸಂದೇಹ ಪಟ್ಟು ಆಯನೂರು ಅವರಿಗೆ ಕರೆ ಮಾಡಿದಾಗ ಖುದ್ದು ಅವರೇ ಶಾಕ್‌ ಆದರು.

ನಂತರ ಪೊಲೀಸರಿಗೆ ದೂರು ದಾಖಲು ಮಾಡಿದಾಗ, ಆಯನೂರು ಮಂಜುನಾಥ ಅವರ ಫೇಸ್‌ಬುಕ್‌ ಖಾತೆಯನ್ನು ಹ್ಯಾಕ್‌ ಮಾಡಿರುವ ದುಷ್ಕರ್ಮಿಗಳು ಅವರ ಹೆಸರಿನಲ್ಲಿ ಹಣ ಕೇಳುತ್ತಿರುವುದು ತಿಳಿದುಬಂದಿದೆ. ಮೆಸೆಂಜರ್‌ ಮೂಲಕ ಅವರ ಪರಿಚಯಸ್ಥರಿಗೆ ಹಣದ ಬೇಡಿಕೆ ಒಡ್ಡಲಾಗಿದೆ.

ನಂತರ ಈ ಬಗ್ಗೆ ಸ್ಪಷ್ಟಪಡಿಸಿರುವ ಆಯನೂರು, ದಯವಿಟ್ಟು ಇಂಥ ಮೆಸೇಜ್‌ ಬಂದರೆ ಹಣ ಕೊಡಬೇಡಿ. ನನಗೆ ಯಾವುದೇ ಹಣದ ಅಗತ್ಯತೆಯಿಲ್ಲ. ಮೋಸ ಹೋಗಬೇಡಿ ಎಂದು ಹೇಳಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ (ದಿಗ್ವಿಜಯ ನ್ಯೂಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net