ಮೂರನೆಯ ಮದುವೆಗೆ ಆಮೀರ್‌ ರೆಡಿ- ಅಧಿಕೃತ ಘೋಷಣೆಯೊಂದೇ ಬಾಕಿ? ಮಗಳ ವಯಸ್ಸಿನವಳಾ?

Published on

ಮುಂಬೈ: ಮೊದಲನೆಯ ಪತ್ನಿ ರೀನಾ ದತ್ತಾ ಜತೆ 15 ವರ್ಷ ಸಂಸಾರ ನಡೆಸಿ, ಆಕೆಗೆ ವಿಚ್ಛೇದನ ನೀಡಿ, ಕಿರಣ್‌ ರಾವ್‌ ಜತೆ ಮತ್ತೆ 15 ವರ್ಷ ದಾಂಪತ್ಯ ಜೀವನ ಮಾಡಿ, ಆಕೆಗೂ ಈಚೆಗಷ್ಟೇ ಡಿವೋರ್ಸ್‌ ನೀಡಿದ್ದ ಬಾಲಿವುಡ್‌ ನಟ ಆಮೀರ್‌ ಖಾನ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೊದಲ ಪತ್ನಿಯಿಂದ ಇಬ್ಬರು ಮಕ್ಕಳು ಮತ್ತು ಎರಡನೆಯ ಪತ್ನಿಯಿಂದ ಓರ್ವ ಪುತ್ರನನ್ನು ಪಡೆದಿರುವ ಆಮೀರ‌ ಖಾನ್‌ ಇದೀಗ ಮೂರನೆಯ ಮದುವೆಯಾಗಲಿದ್ದಾರೆ ಎಂಬ ಬಲವಾದ ಸುದ್ದಿ ಹಬ್ಬಿದೆ.

ಈ ಸುದ್ದಿಗೆ ಮೌನವೇ ಉತ್ತರ ಎಂಬಂತೆ ಆಮೀರ್‌ ಖಾನ್‌ ಪ್ರತಿಕ್ರಿಯಿಸಿದ್ದು, ಮದುವೆ ಆಗುತ್ತಿರುವುದು ನಿಜ ಎಂಬಂತೆ ಪರೋಕ್ಷವಾಗಿ ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಎರಡನೆಯ ಪತ್ನಿ ಕಿರಣ್ ರಾವ್​ಗೆ ವಿಚ್ಛೇದನ ನೀಡಿದಾಗ ಬಹಳ ಸುದ್ದಿಯಾಗಿತ್ತು. ಏಕಾಏಕಿ ಘೋಷಣೆ ಮಾಡಿರುವ ಈ ಡಿವೋರ್ಸ್‌ ಹಿಂದಿನ ಅಸಲಿ ಕಾರಣ ತಿಳಿಯದಿದ್ದರೂ ತಾವಿಬ್ಬರೂ ಸ್ನೇಹಿತರು, ಸ್ನೇಹಿತರಾಗಿಯೇ ಇರುತ್ತೇವೆ ಎಂದು ಜನರ ಮುಂದೆ ಹೇಳಿಕೆ ನೀಡಿದ್ದರು. ಇದೀಗ ಮೂರನೆಯ ಮದುವೆಗೆ ನಟ ಸಿದ್ಧತೆ ಮಾಡಿಕೊಂಡಿರುವುದು ಬಹುತೇಕ ಖಚಿತವಾಗಿದೆ.

ಸದ್ಯ ಆಮೀರ್‌ ಖಾನ್‌ ಅವರ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಚಿತ್ರ ಬಿಡುಗಡೆಗೆ ಇವರು ಕಾದಿದ್ದು, ಕೂಡಲೇ ಮುಂದಿನ ಮದುವೆಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಬರುವ ಡಿಸೆಂಬರ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸದ್ಯ ಇದು ಮುಂದಕ್ಕೆ ಹೋಗಿದೆ. ಇದಕ್ಕೆ ಕಾರಣ ಕೂಡ ಆಮೀರ್‌ ಖಾನ್‌ ಅವರ ವಿಚ್ಛೇದನ ಮತ್ತು ಮರುಮದುವೆಯ ಸುದ್ದಿ ಎನ್ನಲಾಗಿದೆ. ಎಲ್ಲೆಡೆ ಈ ಚಿತ್ರಕ್ಕಿಂತಲೂ ಹೆಚ್ಚಾಗಿ ಇವರ ವೈಯಕ್ತಿಯ ಜೀವನದ ಸುದ್ದಿ ಹರಿದಾಡುತ್ತಿರುವ ಕಾರಣ, ಸದ್ಯಕ್ಕೆ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಮೂರನೆಯ ಮದುವೆಯ ಸುದ್ದಿಯನ್ನು ಗಪ್‌ಚುಪ್‌ ಇಟ್ಟಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ ಮೂರನೆಯ ವಧುವಾಗಿ ಬರುವವಳು ಯಾರು ಎಂಬ ಬಗ್ಗೆ ಎಲ್ಲಿಯೂ ಆಮೀರ್‌ ಖಾನ್‌ ಬಾಯಿಬಿಟ್ಟಿಲ್ಲ. ಆದರೆ ಎರಡನೆಯ ಪತ್ನಿಗೆ ಡಿವೋರ್ಸ್‌ ನೀಡಿದಾಗ ಹಾಗೂ ಆ ನಂತರದ ದಿನಗಳಲ್ಲಿಯೂ ಆಮೀರ್‌ ಹೆಚ್ಚಾಗಿ ನಟಿ ಫಾತೀಮಾ ಸಮಾ ಶೇಖ್‌ ಜತೆ ಹೆಚ್ಚಾಗಿ ಒಡನಾಟ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಆಕೆಯನ್ನೇ ಆಮೀರ್‌ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲ ಎರಡೂ ಪತ್ನಿಯರು ಹಿಂದೂಗಳಾಗಿದ್ದು, ಈಗ ಯಾರನ್ನು ಆಮೀರ್‌ ಮದುವೆಯಾಗಲಿದ್ದಾರೆಯೇ ಎಂದು ಕಾದುನೋಡಬೇಕಿದೆ.

ಅಂದಹಾಗೆ ಆಮೀರ್‌ ಖಾನ್‌ಗೆ 56 ವರ್ಷ ಹಾಗೂ ಫಾತೀಮಾಗೆ 29 ವರ್ಷ ವಯಸ್ಸು! ಆಮೀರ್ ಖಾನ್‌ ಅವರ ಮೊದಲ ಪುತ್ರಿ ಇರಾನ್‌ ಖಾನ್‌ಗೆ 24 ವರ್ಷ, ಮಗ ಜುಬೇದ್‌ ಖಾನ್‌ಗೆ 23 ವರ್ಷ ವಯಸ್ಸು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net