ಮೂರ್ನಾಲ್ಕು ಮದುವೆಯ ಪರಿಪಾಠದಿಂದ ಜನಸಂಖ್ಯೆ ಹೆಚ್ಚಳ: ಸಚಿವ ಅಠಾವಳೆ ಹೇಳಿಕೆ

ramdas
Published on

ಬೆಂಗಳೂರು: ದೇಶದಲ್ಲಿ ಜಾತಿವಾರು ಜನಗಣತಿ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜನಗಣತಿ ಎಲ್ಲ ಸಮುದಾಯಗಳಲ್ಲೂ ಮಾಡುವ ಅಗತ್ಯ ಇದೆ. ಸಮುದಾಯವಾರು ಆಗಬೇಕಿದೆ ಎಂದರು.

ಒಬಿಸಿ ಜನಗಣತಿ ಮಾತ್ರ ಮಾಡಬಾರದು.ದಲಿತ ವರ್ಗದ‌ ಮೀಸಲಾತಿಯೂ ಆ ವರ್ಗದ ಮೇಲಿನ ಶೋಷಣೆಗೆ ಒಂದು ಕಾರಣ ಎಂದು ಹೇಳಿದರು.ರಾಜ್ಯಗಳಿಗೆ ಮೀಸಲಾತಿ ಕೊಡುವ ಅಧಿಕಾರವಿದೆ. ಸಂವಿಧಾನದ 102 ವಿಧಿಯನ್ವಯ ರಾಜ್ಯಗಳಿಗೂ ಮೀಸಲಾತಿ ಹೆಚ್ಚಿಸುವ ಅಧಿಕಾರವಿದೆ. ಜತೆಗೆ ಮೀಸಲಾತಿ ಹೆಚ್ಚಳ ಸಂಬಂಧ ಸಂವಿಧಾನದ ತಿದ್ದುಪಡಿ ಆಗಬೇಕಿದೆ. ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ನ್ಯಾಯಾಲಯದ ಅಭಿಪ್ರಾಯ. ಆದರೆ, ಮೀಸಲಾತಿ ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಮೀಸಲಾತಿ ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರ ನಿಯಮ ರೂಪಿಸಬೇಕಿದೆ ಎಂದು ಹೇಳಿದರು.

ದೇಶದಲ್ಲಿ ಜಾತಿ ಗಣತಿಯಾಗಬೇಕು. ಇದರಿಂದ ಯಾವುದೇ ಕೋಮುವಾದ ಬೆಳೆಯುವುದಿಲ್ಲ. ನಾನು ಮುಂದಿನ ಬಾರಿ ಜಾತಿ ಗಣತಿ ಆಗ್ರಹಿಸುತ್ತೆನೆ ಎಂದು ಹೇಳಿದರು. ಜಾತಿ ಜನಗಣತಿಯಿಂದ ಯಾವ ಜಾತಿಯವರು ಎಷ್ಟು ಇದ್ದಾರೆ ಎಂದು ಗೊತ್ತಾಗುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕ ವಿಚಾರದಲ್ಲಿ ಅನುಕೂಲವಾಗುತ್ತದೆ. ಎಸ್ಸಿ ಮತ್ತು ಎಸ್ಟಿಯಲ್ಲಿ ಉಳ್ಳವರು ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಾಗಬಾರದು ಆರ್ಥಿಕವಾಗಿ ಹಿಂದೂಳಿದವರಿಗೆ ದುರ್ಬಲರಿಗೆ ಅನಕೂಲ ಸಿಗುವಂತೆ ಆಗಬೇಕು. ನಾನು ಪ್ರಧಾನಿ ಬಳಿ ಈ ವಿಚಾರವಾಗಿ ಮನವಿ ಮಾಡಿದ್ದೇನೆ ಎಂದರು.

ಕೆಲವು ಜಮೀನ್ದಾರರು, ಅಧಿಕಾರಿಗಳು, ಹಣವಂತರು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಎಲ್ಲ ಸಮುಧಾಯದಲ್ಲಿ ಬಡವರು, ಹಿಂದುಳಿದವರು ಇದ್ದಾರೆ.ಹಾಗಾಗಿ ಅವಶ್ಯಕತೆ ಇಲ್ಲದವರಿಗೆ ರಿಜರ್ವೆಶನ್ ಸಿಗಬಾರದು.ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಮನ್ನಣೆ ನೀಡಬೇಕು ಎಂದು ಉಳ್ಳವರು ಮೀಸಲಾತಿ ಸೌಲಭ್ಯ ಪಡೆಯುತ್ತಿರುವುದಕ್ಕೆ ಅಠವಾಳೆ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ, ಯುಪಿಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕರಡು ವಿಧೇಯಕ ಕುರಿತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ವಿವಾದಾತ್ಮಕ ಹೇಳಿಕೆ ನೀಡಿದರು. ಮುಸ್ಲಿಮರಲ್ಲಿ ಜನಸಂಖ್ಯೆ ಹೆಚ್ಚಳ ತಗ್ಗಿಸಲು ಈ ನಿಯಮ ತರಲಾಗುತ್ತಿದೆ. ಮುಸ್ಲಿಮರ ಜನಸಂಖ್ಯೆ ದಿಢೀರನೇ ಹೆಚ್ಚಾಗಿದೆ. ಮುಸ್ಲಿಮರಲ್ಲಿ ಮೂರ್ನಾಲ್ಕು ಮದುವೆ ಆಗುವ ಪರಿಪಾಠ ಇದೆ. ಹೀಗಾಗಿ ಹೆಚ್ಚು ಮಕ್ಕಳು ಜನಿಸುತ್ತಾರೆ. ಮುಸ್ಲಿಮರಲ್ಲಿ ಜನಸಂಖ್ಯೆ ನಿಯಂತ್ರಣ ಆಗಬೇಕಿದೆ. ಹಿಂದೂ ಸೇರಿದಂತೆ ಇತರೇ ಧರ್ಮಗಳಲ್ಲೂ ಜನಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಇಳಿಕೆ ಇಂದಿನ‌ ಅಗತ್ಯವಾಗಿದೆ ಎಂದು ಅಠಾವಳೆ ಹೇಳಿದರು.

ಅಭಿವೃದ್ಧಿಯತ್ತ ಭಾರತ: ದೇಶದಲ್ಲಿ 42.58 ಕೋಟಿ ಜನಧನ್ ಖಾತೆಗಳನ್ನು ತೆರೆಯಲಾಗಿದೆ. 1.52 ಕೋಟಿ ಜನಧನ್ ಖಾತೆಗಳು ಕರ್ನಾಟಕ ರಾಜ್ಯದಲ್ಲಿ ತೆರೆಯಲಾಗಿದೆ. ಮುದ್ರಾ ಯೋಜನೆಯಡಿ ಉದ್ದಿಮೆದಾರರಿಗೆ 50 ಸಾವಿರದಿಂದ 10 ಲಕ್ಷ ರೂ.ಸಾಲ ಸೌಲಭ್ಯ ಕೊಡಲಾಗುತ್ತಿದೆ. 30.18 ಕೋಟಿ ಜನರಿಗೆ ಈ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ‌. ಈ ಪೈಕಿ 2.96 ಕೋಟಿ ಜನರಿಗೆ ರಾಜ್ಯದಲ್ಲಿ ಸಾಲ ಒದಗಿಸಲಾಗಿದೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 1.91 ಕೋಟಿ ಮನೆಗಳ ನಿರ್ಮಾಣ ಪೂರ್ಣಗೊಂಡಿವೆ. ರಾಜ್ಯದಲ್ಲಿ 1.89 ಲಕ್ಷ ಮನೆಗಳು ಪೂರ್ಣೊಳಿಸಲಾಗಿದೆ. ಉಜಾಲಾ ಯೋಜನೆಯಡಿ 2015-21 ರವರೆಗೆ 35.20 ಜನರಿಗೆ ಯೋಜನೆಯ ಸೌಲಭ್ಯ ದೊರೆತಿದೆ. ರಾಜ್ಯದಲ್ಲಿ 2.39 ಕೋಟಿ ಉಜಾಲಾ ಯೋಜನೆ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು .

ನರೇಂದ್ರ ಮೋದಿ ಸರ್ಕಾರ ಏಳು ವರ್ಷ ಪೂರೈಸಿದೆ. ಸಬ್ ಕಾ ಸಾಥ್ , ಸಬ್ ಕಾ ವಿಕಾಸ್ ಅಡಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಜನಧನ್ ಯೋಜನೆ, ಮುದ್ರಾ ಯೋಜನೆ ಯಶಸ್ವಿಯಾಗಿವೆ. ಜನಧನ್ ಯೋಜನೆಯಿಂದ ಎಲ್ಲರಿಗೂ ಬ್ಯಾಂಕ್ ಅಕೌಂಟ್ ಸಿಕ್ಕಿದೆ. ಇದರಿಂದ ಸರ್ಕಾರದ ಪ್ರಯೋಜನ ‌ಪಡೆಯಲು ಸಾದ್ಯವಾಗಿದೆ ಎಂದರು. ಮುದ್ರಾ ಯೋಜನೆಯಿಂದ ಯುವಕರಿಗೆ ಸಾಲ ಸಿಕ್ಕಿದೆ. ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಬಹುದು. ಸ್ವ ಉದ್ಯೋಗ ಮಾಡಬಹುದುದು ಎಂದು ಹೇಳಿದರು.

ಪಾಕಿಸ್ತಾನದ ಜತೆ ಮಾತುಕತೆ ಅಸಾಧ್ಯ: ಆತಂಕವಾದ ಕಡಿಮೆ ಆಗುವವರೆಗೂ ಪಾಕಿಸ್ತಾನದ ಜತೆ ಮಾತುಕತೆ ಅಸಾಧ್ಯ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಆಗ್ರಾ ನಗರಕ್ಕೆ ಮುಷರ್ರಫ್ ರನ್ನು ಆಹ್ವಾನಿಸಿದ್ದರು.ಆಗ ಮಾತುಕತೆಯ ಪ್ರಯತ್ನ ನಡೆದಿತ್ತು. ಪಾಕಿಸ್ತಾನ ಕಾಶ್ಮೀರ ವಿಚಾರ ಮರೆತು ಬಿಡಲಿ.ಕಾಶ್ಮೀರ ಭಾರತಕ್ಕೆ ಸೇರಿದ್ದುಎಂದು ತಿಳಿಸಿದರು. ಪಾಕಿಸ್ತಾನಕ್ಕೆ ಭಾರತದ ದೋಸ್ತಿ ಅಗತ್ಯತೆ ಇದೆ. ಆತಂಕವಾದ, ಕಾಶ್ಮೀರ ಮರೆತು ಪಾಕ್ ಮಾತುಕತೆಗೆ ಬರಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net