

ನವದೆಹಲಿ: ಆತಿಥೇಯ ಇಂಗ್ಲೆಂಡ್ ವಿರುದ್ಧ ಶುಕ್ರವಾರದಿಂದ ಆರಂಭವಾಗಿರುವ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಪ್ರವಾಸಿ ಭಾರತ ಮಹಿಳಾ ತಂಡ 18 ರನ್ಗಳಿಂದ ಸೋತರೂ ಟೀಮ್ ಇಂಡಿಯಾದ ಹರ್ಲೀನ್ ಡಿಯೋಲ್ ಮಾತ್ರ ಎಲ್ಲರ ಮನ ಗೆದ್ದಿದ್ದಾರೆ.
ಇಂಗ್ಲೆಂಡ್ನ ಆ್ಯಮಿ ಎಲೆನ್ ಜೋನ್ಸ್ ಬಾರಿಸಿದ ಚೆಂಡು ಬೌಂಡರಿ ಗೆರೆಯಿಂದಾಚೆಗೆ ಬೀಳಬೇಕೆನ್ನುವಷ್ಟೆರಲ್ಲಿ ಲಾಂಗ್ ಆಫ್ನಲ್ಲಿದ್ದ ಹರ್ಲೀನ್ ಡಿಯೋಲ್, ಡೈವ್ ಮೂಲಕ ಅದ್ಭುತ ಕ್ಯಾಚ್ ತೆಗೆದುಕೊಂಡಿದ್ದರಿಂದ ಜಾಲತಾಣದಲ್ಲಿ ಹರ್ಲೀನ್ ನಾಯಕಿಯಾಗಿ ಮಿಂಚಿದ್ದು, ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
ಈ ಕ್ಯಾಚ್ ಪ್ರಧಾನಿ ನರೇಂದ್ರ ಮೋದಿಯವರ ಮನವನ್ನೂ ಗೆದ್ದಿದೆ. ಟ್ವಿಟರ್ ಮೂಲಕ ಹರ್ಲೀನ್ ಅವರಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದು ’ವೆಲ್‌ಡನ್ ಹರ್ಲೀನ್’ ಎಂದು ಹೇಳಿದ್ದಾರೆ.
ಹರ್ಲೀನ್ ಅವರು ಅದ್ಭುತ ಕ್ಯಾಚ್ ವಿಡಿಯೋವನ್ನು ಟೀಮ್ ಇಂಡಿಯಾದ ಮಾಜಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಕ್ರಿಕೆಟ್ ಮೈದಾನದಲ್ಲಿ ಇದುವರೆಗೂ ನಾನು ನೋಡಿರದ ಅದ್ಭುತ ಕ್ಯಾಚ್ ಇದು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದು, ಇದೀಗ ವೈರಲ್ ಆಗಿದೆ.
ಟೀಮ್ ಇಂಡಿಯಾದ ಪ್ರಯತ್ನ ನಡುವೆಯೂ ಪಂದ್ಯವು ಇಂಗ್ಲೆಂಡ್ ಪಾಲಾಯಿತು. 3 ವಿಕೆಟ್ ನಷ್ಟಕ್ಕೆ ಭಾರತ 54 ರನ್ ಗಳಿಸಿದ್ದಾಗ ಆಗಮಿಸಿದ ಮಳೆ ಇಡೀ ಕ್ರೀಡಾಂಗಣವನ್ನು ಒದ್ದೆ ಮಾಡಿದ ಪರಿಣಾಮ ಕೊನೆಗೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ಜಯ ಘೋಷಿಸಲಾಯಿತು. ಇನ್ನು ಸರಣಿಯ ಎರಡನೇ ಪಂದ್ಯ ಭಾನುವಾರ ಹೂವ್ನ ಕೌಂಟಿ ಗ್ರೌಂಡ್ನಲ್ಲಿ ನಡೆಯಲಿದೆ. (ಏಜೆನ್ಸೀಸ್)