

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಂಗಳೂರಿನಲ್ಲಿ ಮಂಗಳವಾರ ಬಿಡಾರ ಹೂಡಿರುವಾಗಲೇ ರಾಜ್ಯ ಬಿಜೆಪಿ ನಾಯಕರಿಬ್ಬರ ಜನರು ಜುಗಲ್ಬಂದಿ ಗಮನ ಸೆಳೆದಿದೆ.
ಮೇ 10 ರೊಳಗೆ ಮುಖ್ಯಮಂತ್ರಿ ಬದಲಾಗುವರು, ಪರಿಸ್ಥಿತಿ ಅವಲೋಕನ ಮಾಡಲೆಂದು ಷಾ ಬೆಂಗಳೂರಿಗೆ ಬಂದಿದ್ದಾರೆ. ಅವರದೇ ಆದ ಮೂಲದಿಂದ ಸರ್ಕಾರದ ಕಾರ್ಯವೈಖರಿ ಬಗ್ಗೆ ವರದಿ ತರಿಸಿಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಜಯಪುರದಿಂದ ಬಾಂಬ್ ಎಸೆದಿದ್ದಾರೆ.
ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರು ಬದಲಾಗುವುದಿಲ್ಲ. ಹಗಲು ಕನಸು ಕಾಣಬೇಡಿ, ಬಿಸಿಲ್ಗುದುರೆ ಬೆನ್ನತ್ತಬೇಡಿ. ಸಿಎಂ ಬೊಮ್ಮಾಯಿ ಅವರಿಗೆ ಕೇಂದ್ರ ನಾಯಕರ ಸಂಪೂರ್ಣ ಸಹಕಾರವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಬೆಂಗಳೂರಿನಿಂದ ಪ್ರತ್ಯುತ್ತರಿಸಿ ಯತ್ನಾಳ್ ಬಾಂಬ್ ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದ್ದಾರೆ.
ಈ ಮಧ್ಯೆ ಷಾ ಅವರು ತಂಗಿರುವ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಮಧ್ಯಾಹ್ನ ರಾಜ್ಯ ಪ್ರಮುಖರ ಜತೆಗೆ ಮಾತ್ರ ಚರ್ಚಿಸಲಿದ್ದು, ಉಳಿದವರೊಂದಿಗೆ ಸಭೆ ರದ್ದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯತ್ನಾಳ್ ವಿರುದ್ಧ ಕ್ರಮವಾಗಬಹುದೆ?
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವರ ನಾಯಕತ್ವವನ್ನು ಯತ್ನಾಳ್ ಬಹಿರಂಗವಾಗಿ ಪ್ರಶ್ನಿಸಿದ್ದರು. ಇದೀಗ ಬೊಮ್ಮಾಯಿ ನಾಯಕತ್ವದ ಬಗ್ಗೆ ಭವಿಷ್ಯ ನುಡಿದು ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದು, ಷಾ ರಾಜ್ಯ ಪ್ರವಾಸದ ಕಾಲಕ್ಕೆ ನೀಡಿರುವ ಈ ಹೇಳಿಕೆಗೆ ಮಹತ್ವವಿದೆಯೆ ? ಇಲ್ಲವೇ ಯತ್ನಾಳ್ ವಿರುದ್ಧ ಕ್ರಮದ ಅಸ್ತ್ರ ಪ್ರಯೋಗಿಸಿ ಇಂತಹ ಹೇಳಿಕೆ ಸಹಿಸುವುದಿಲ್ಲ ಎಚ್ಚರಿಕೆ ಸಂದೇಶ ರವಾನಿಸಲಿದ್ದಾರೆಯೆ ? ಎಂಬ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ.
ಬಿಎಸ್ ವೈ ವಿರುದ್ಧ ಪದೇ ಪದೆ ಹೇಳಿಕೆ ನೀಡಿದ ಯತ್ನಾಳ್ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ ಪಕ್ಷದ ನಾಯಕರು ಬೇಸರ ವ್ಯಕ್ತಪಡಿಸಿದ ನಂತರ ಯತ್ನಾಳ್ ಗೆ ನೋಟಿಸ್ ನೀಡಿ ಲಿಖಿತ ಸಮಜಾಯಿಷಿ ತರಿಸಿಕೊಂಡು ಪಕ್ಷದ ವರಿಷ್ಠರು ಕೈತೊಳೆದುಕೊಂಡಿದ್ದರು. ಬೊಮ್ಮಾಯಿ ನಾಯಕತ್ವದ ಬಗ್ಗೆಯೂ ಮತ್ತದೇ ಧ್ವನಿ ಎತ್ತಿದ್ದು, ವರಿಷ್ಠರ ಮುಂದಿನ ನಡೆಯನ್ನು ಪಕ್ಷದ ರಾಜ್ಯ ಮುಖಂಡರು ಕಾದು ನೋಡುವಂತೆ ಮಾಡಿದೆ.