ಅರ್ಕಾವತಿ ಆರ್ತನಾದಕ್ಕೆ ಕಾರಣ ಯಾರು ‘ಕ್ಲೀನ್‌ಚಿಟ್‌’ ಸಿದ್ದರಾಮಯ್ಯನವರೆ? ಎಚ್‌ಡಿಕೆ ಟಾಂಗ್‌

HDK
Published on

ಬೆಂಗಳೂರು: ನಾನು ಕ್ಲೀನ್ ಎಂದು ಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯನವರೇ ' ಅರ್ಕಾವತಿ ' ಆರ್ತನಾದಕ್ಕೆ ಕಾರಣರು ಯಾರು? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಕಮಿಷನ್ ವ್ಯವಹಾರದಲ್ಲಿ ನಾನು ನೀಟ್, ಕ್ಲೀನ್ ಎನ್ನುತ್ತಿದ್ದಾರೆ ಪ್ರತಿಪಕ್ಷ ನಾಯಕರು. ಐದು ವರ್ಷ ಸಿಎಂ ಆಗಿದ್ದರೂ ಈ ಸತ್ಯ ಆಚೆ ಬಿದ್ದರೆ ಆ ಸಿದ್ಧಹಸ್ತರು ಮುಖವನ್ನು ಎಲ್ಲಿ ಇಟ್ಟುಕೊಳ್ಳುತ್ತಾರೆ? ದೇವರಾಜ ಅರಸು ಅವರ ನಂತರ ' ಐದು ವರ್ಷದ ಮುಖ್ಯಮಂತ್ರಿ ' ಎಂದು ಹೇಳಿಕೊಳ್ಳುವ ಅವರ ಸಿದ್ಧಪುರುಷರ ಪಾಡೇನು? ' ಐದು ವರ್ಷದ ಮುಖ್ಯಮಂತ್ರಿ' ಎಂಬ ಪ್ರಭಾವಳಿಯ ಕಥೆ ಏನು? ಎಂದು ಕೆಣಕಿದ್ದಾರೆ.

ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ ಅನ್ನುತ್ತಾರೆ. ಮಾತೆತ್ತಿದರೆ ಕುಮಾರಸ್ವಾಮಿಯದ್ದೇ ಜಪ! ಜತೆಗೆ ಜೆಡಿಎಸ್ ಬಗ್ಗೆ ವಿಷ ಕಾರುವುದು ಸುಳ್ಳಾ? ಅವರ ಹೇಳಿಕೆಗಳನ್ನು ಇಡೀ ರಾಜ್ಯವೇ ಕೇಳಿಸಿಕೊಂಡಿದೆ.

ನನ್ನನ್ನು ಕಂಡರೆ ಕುಮಾರಸ್ವಾಮಿಗೆ ಭಯ! ಅಂತಾರೆ. ಇದು ಭ್ರಮೆಯ ಪರಮಾವಧಿ. ಮತ್ತೆ ಸಿಎಂ ಆಗಲ್ಲ ಎಂದು ಖಚಿತವಾದ ಮೇಲೆ ಹತಾಶೆ, ಅಸಹನೆಯ ಬೆಂಕಿಯಲ್ಲಿ ಬೇಯುತ್ತಿದ್ದಾರೆ, ಪಾಪ. ಇದು ವಿಪರೀತಕ್ಕೆ ಹೋಗಿದೆ ಎನ್ನುವುದಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಅವರು ಕೊಟ್ಟ ಹೇಳಿಕೆಗಳೇ ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ.

ಚುನಾವಣೆಯಲ್ಲಿ ನಮ್ಮ ತಂದೆ ಸೋತಿದ್ದಾರೆ. ನನ್ನ ಅಣ್ಣ ಸೋತಿದ್ದಾರೆ, ನಾನೂ ಸೋತಿದ್ದೇನೆ. ಸೋತ ಮೇಲೆ ನಾವ್ಯಾರೂ ಅಧೀರರಾಗಿಲ್ಲ. ಸೋತಿದ್ದಕ್ಕೆ ನಾವು ಕಣ್ಣೀರು ಹಾಕಿಲ್ಲ. ಸಿದ್ದಹಸ್ತರ ಕಣ್ಣೀರ ಕೋಡಿಯನ್ನು ಕಂಡ ದೇವೇಗೌಡರು ಇನ್ನೂ ನಮ್ಮ ಜತೆ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸುಖಾಸುಮ್ಮನೆ ಅವರ ಬಗ್ಗೆ ಮಾತನಾಡುವ ತೆವಲು ನಂಗಂತೂ ಇಲ್ಲ. ನಮ್ಮ ಪಕ್ಷದಿಂದ ಎಗರಿಸಿಕೊಂಡು ಹೋದ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದರೆ ನಮ್ಮ ಪಕ್ಷದ ಬಗ್ಗೆ ಏಕೆ ಮಾತನಾಡಬೇಕು? ಜೆಡಿಎಸ್ ಪಕ್ಷವನ್ನು ತುಮಕೂರಿನಿಂದ ಓಡಿಸಿ ಎಂದಿದ್ದು ಯಾವ ಸಂಸ್ಕೃತಿ? ಎಂದು ಕುಮಾರಸ್ವಾಮಿ ಪ್ತಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net