ಮೇಘಸ್ಫೋಟ: ಶಿವಮೊಗ್ಗದ ಮಹಿಳೆಯರು ಸೇಫ್​- ಅಮರನಾಥನ ದರ್ಶನ ಸಿಗದೇ ವಾಪಸ್​

amamranath
Published on

ಶಿವಮೊಗ್ಗ: ಅಮರನಾಥ ದೇಗುಲದ ಬಳಿ ಮೇಘಸ್ಫೋಟಗೊಂಡಿದ್ದು 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಬೆನ್ನಲ್ಲೇ ಇದೀಗ ಎಲ್ಲರ ಕುಟುಂಬಸ್ಥರಲ್ಲಿ ಭಯ ಕಾಡುತ್ತಿದೆ.

ಶಿವಮೊಗ್ಗದಿಂದ ಮಹಿಳೆಯರ ತಂಡ ಯಾತ್ರೆಗೆ ತೆರಳಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಮೇಘಸ್ಫೋಟದ ಹಿನ್ನೆಲೆಯಲ್ಲಿ ಯಾತ್ರೆ ರದ್ದುಗೊಂಡಿದ್ದು ಸೋಮವಾರ ಶಿವಮೊಗ್ಗಕ್ಕೆ ವಾಪಸಾಗಲಿದ್ದಾರೆ.

ಕಳೆದ ಜುಲೈ 4ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದ ಮಹಿಳೆಯರು ಬೆಂಗಳೂರಿನಿಂದ ವೈಷ್ಣೋದೇವಿ ದರ್ಶನ ಪಡೆದು, ಬಳಿಕ ಅಮರನಾಥ ದರ್ಶನಕ್ಕೆ ಹೋಗಿದ್ದಾರೆ. ಮಾಜಿ ಮೇಯರ್ ಸುರೇಖಾ ಮುರಳೀಧರ್ ಸೇರಿದಂತೆ 16 ಮಂದಿ ಮಹಿಳೆಯರು ಯಾತ್ರೆಗೆ ಹೋಗಿದ್ದಾರೆ. ಪ್ರಸ್ತುತ ಇವರೆಲ್ಲರೂ ಅಮರನಾಥ ಸಮೀಪದ ಪಹಲ್ಗಾಮ್ ಬೇಸ್ ಕ್ಯಾಂಪ್​ನಲ್ಲಿ ಇದ್ದಾರೆ.

ಪೂರ್ವ ನಿಗದಿಯಂತೆ ನಿನ್ನೆಯೇ ಅಮರನಾಥ ದರ್ಶನಕ್ಕೆ ಈ ತಂಡ ಹೋಗಬೇಕಿತ್ತು. ಜುಲೈ 5ರಂದು ಪ್ರತಿಕೂಲ ಹವಾಮಾನ ಹಿನ್ನೆಲೆ ಅಮರನಾಥ ದರ್ಶನವನ್ನು ಮುಂದೂಡಲ್ಪಟ್ಟಿತ್ತು. ಸ್ಥಳೀಯ ಆಡಳಿತದ ಸೂಚನೆಯಂತೆ ನಿನ್ನೆಯೇ ದರ್ಶನಕ್ಕೆ ತೆರಳಲು ಬೇಸ್ ಕ್ಯಾಂಪ್ ಮಹಿಳಾ ತಂಡ ಹೋಗಿತ್ತು. ಆದರೆ ದರ್ಶನಕ್ಕೆ ಹೋಗಲಾಗದೇ ಬೇಸ್ ಕ್ಯಾಂಪ್ ನಿಂದ ವಾಪಸ್ ಆಗಿತ್ತು. ಇದೀಗ ಅಮರನಾಥ ಯಾತ್ರೆಯನ್ನೇ ರದ್ದುಗೊಳಿಸಿ, ವಾಪಸ್ ಹೊರಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net