

ಬೆಂಗಳೂರು: ಅಗ್ನಿಪಥ್ ಯೋಜನೆ ಯೋಜನೆ ವಿರೋಧಿ ಹಿಂಸಾಚಾರ ಅಕ್ಷಮ್ಯ ಅಪರಾಧ. ಯೋಜನೆ ಉದ್ದೇಶ ತಿಳಿದುಕೊಳ್ಳದೆ ದೇಶದ ಆಸ್ತಿಗೆ ಬೆಂಕಿ ಹಚ್ಚುವ ಕೃತ್ಯ ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ದೇಶದ ಸೇನೆ ಹಾಗೂ ಯುವ ಶಕ್ತಿಗೆ ಚೈತನ್ಯ ತುಂಬುವುದಾಗಿದೆ. ಸದೃಢ, ಶಿಸ್ತುಬದ್ಧ, ಕಠಿಣ ಪರಿಶ್ರಮ ಯುವ ಸಮೂಹವನ್ನು ರೂಪಿಸುವ ದೂರಾಲೋಚನೆಯ ಮಹೋನ್ನತ ಉದ್ದೇಶ ಹೊಂದಿದೆ ಎಂದು ಸಮಜಾಯಿಷಿ ನೀಡಿದರು.
ಅಗ್ನಿಪಥ್ ಯೋಜನೆ ಉದ್ದೇಶ ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಸೇನೆ ಸೇರಬಯಸಿ ಪರೀಕ್ಷೆ ಬರೆದವರಿಗೂ ಪರಿಹಾರ ಮಾರ್ಗೋಪಾಯದ ಚಿಂತನೆ ನಡೆಸಿದ್ದು, ಯುವ ಸಮೂಹಕ್ಕೆ ಕಾಲಕ್ರಮೇಣ ವಾಸ್ತವಾಂಶ ಮನವರಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಕಿಗೆ ತುಪ್ಪ ಸುರಿಯುವುದು
ಬೆಂಕಿಗೆ ತುಪ್ಪ ಸುರಿಯವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿಕೆ, ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ಎತ್ತಿ ತೋರಿಸುತ್ತದೆ. ಜವಾಬ್ದಾರಿಯುತ ಪ್ರತಿಪಕ್ಷಕ್ಕೆ ಸಲ್ಲದ ನಡೆಯಿದು ಎಂದು ಬೊಮ್ಮಾಯಿ ಕಿಡಿಕಾರಿದರು.
ಪ್ರತಿಷ್ಠೆಯಲ್ಲ
ಪಠ್ಯಪುಸ್ತಕ ಪರಿಷ್ಕರಣೆ ಪ್ರತಿಷ್ಠೆಯಲ್ಲ. ಬದಲಾವಣೆಗೆ ಸರ್ಕಾರ ಮುಕ್ತ ಮನಸ್ಸು ಹೊಂದಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸ್ವಾಮೀಜಿಗಳು, ಸಾಹಿತಿಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಅಗತ್ಯವೆನಿಸಿದರೆ ಬದಲಾವಣೆಗೆ ಸಿದ್ಧವೆಂದರು.