

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಕಳೆದ ಮೇ 19ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. 2020ರ ಮೇ ತಿಂಗಳಿನಲ್ಲಿ ಡಾ. ಅಜೀಜ್ ಪಾಷಾ ಅವರ ಜತೆ ಇವರ ನಡುವೆ ನಡೆದಿದ್ದು, ದಂಪತಿಗೆ ಗಂಡು ಮಗು ಹುಟ್ಟಿದ್ದರ ಕುರಿತು ಸಂಜನಾಗೆ ಚಿಕಿತ್ಸೆ ನೀಡಿದ ವೈದ್ಯರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.
ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ ಅವರು ಚೆನ್ನೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ದಿನವೇ ಸಂಜನಾ ಅಮ್ಮ ಆಗಿದ್ದರು. ಈ ಹಿನ್ನೆಲೆಯಲ್ಲಿ ಗಲ್ರಾನಿ ಕುಟುಂಬದಲ್ಲಿ ಒಂದೇ ದಿನ ಡಬಲ್ ಖುಷಿ ಮನೆಮಾಡಿತ್ತು.
ಇದೀಗ ಸಂಜನಾ ಅವರ ಪತಿ ಅಜೀಜ್ ಪಾಷಾ ಅವರು ಮಗುವಿನ ಆರೈಕೆಯಲ್ಲಿ ತೊಡಗಿರುವ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಆಗಿದೆ. ಮಗುವಿನ ಹೆಸರಿನಲ್ಲಿಯೇ ಇನ್ಸ್ಟಾಗ್ರಾಂ ಖಾತೆಯನ್ನೂ ತೆರೆಯಲಾಗಿದ್ದು, ಪುಟ್ಟ ಕಂದ ತನ್ನ ಹೆಸರನ್ನು ತಾನೇ ಹೇಳಿಕೊಂಡಿರುವಂತೆ ಬರೆಯಲಾಗಿದೆ.
"ಹಾಯ್ ಇವತ್ತು ನಾನು ನನ್ನನ್ನು ಅಧಿಕೃತವಾಗಿ ಪರಿಚಯ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೆಸರು ಅಲಾರಿಕ್. ನನ್ನ ನಿಕ್ ನೇಮ್ ಪ್ರಿನ್ಸ್. ನನಗೆ ಒಂದು ತಿಂಗಳು ವಯಸ್ಸು. ನಾನು ಇನ್ಸ್ಟಾಗ್ರಾಂಗೆ ಹೊಸಬ. ನನ್ನ ಇನ್ಸ್ಟಾಗ್ರಾಂ ಖಾತೆಯನ್ನು ನನ್ನ ಸೂಪರ್ ತಾಯಿ ಸಂಜನಾ ಮ್ಯಾನೇಜ್ ಮಾಡುತ್ತಾರೆ. ನೀವು ನನಗೂ ತುಂಬಾ ಪ್ರೀತಿ ನೀಡುತ್ತೀರಿ ಅಲ್ಲವೆ, ನನ್ನನ್ನು ತುಂಬಾ ಕಾಳಜಿ ತೋರುವ ನನ್ನ ತಂದೆ ಅಜೀಜ್ ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತಿದ್ದೇನೆ" ಎಂದು ಬರೆದುಕೊಳ್ಳಲಾಗಿದೆ.