ಕಂದಮ್ಮನ ಮೇಲೆ ಅತ್ಯಾಚಾರ: ಓಡಿಹೋಗುತ್ತಿದ್ದನ ಮೇಲೆ ಗುಂಡು ಹಾರಿಸಿದ ಪೊಲೀಸರು

Shoot 4 Jul 20
Published on

ಬೆಂಗಳೂರು: ಸುಮಾರು ನಾಲ್ಕೈದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ನಂತರ ಓಡಿಹೋಗಲು ಯತ್ನಿಸುತ್ತಿರುವ ಆರೋಪ ಹೊತ್ತ ಯುವಕನೊಬ್ಬನ ಮೇಲೆ ಪೊಲೀಸರು ಗುಂಡು ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ ಮೆಜಿಸ್ಟಿಕ್ ಬಳಿಯಿಂದ ಮಗುವನ್ನು ಅಪಹರಿಸಿದ್ದ ಈತ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ. ಆರೋಪಿಯನ್ನು ಚೆನ್ನೈ ಮೂಲದ ದಿನೇಶ್ ಎಂದು ಗುರುತಿಸಲಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪರಾರಿಯಾಗಿದ್ದ ಆರೋಪಿಗಾಗಿ ಪೊಲೀಸರು ನಿನ್ನೆಯಿಂದಲೇ ಹುಡುಕಾಟ ಆರಂಭಿಸಿದ್ದರು. ಆರೋಪಿ ದಿನೇಶ್ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಲು ಆರ್ ಆರ್ ಕಲ್ಯಾಣ ಮಂಟಪದ ಬಳಿ ಹೋಗಿದ್ದರು.

ಈ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಠಾಣೆ ಇನ್ ಸ್ಪೆಕ್ಟರ್ ಸುನೀಲ್ ನಾಯ್ಕ ಆರೋಪಿಯ ಕಾಲಿಗೆ ಗುಂಡೇಟು ಹೊಡೆದು ನಂತರ ಆತನನ್ನು ಬಂಧಿಸಿದ್ದಾರೆ.

ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಎಎಸ್​ಐ ಅವರಿಗೂ ಗಾಯಗಳಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್​ ಇಲಾಖೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net