ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್‌ ಆಗಿದ್ದ ಖದೀಮ 14 ವರ್ಷಗಳ ಬಳಿಕ ಸಿಕ್ಕಿಬಿದ್ದ!

kalla
Published on

ಬೆಂಗಳೂರು: ಅಪಘಾತ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಖತರ್ನಾಕ್‌ ಖದೀಮ 14 ವರ್ಷದ ಬಳಿಕ ಸೆರೆ ಸಿಕ್ಕಿಬಿದ್ದಿದ್ದಾನೆ.

ತ್ರಿಪುರಾ ಮೂಲದ ಮತಿವಣ್ಣನ್ ಎಂಬಾತ ಬಂಧಿತನು. ಈತನಿಗೆ 2007ರಲ್ಲಿ ಒಂದು ವರ್ಷ ಜೈಲು ಶಿಕ್ಷೆಯಾಗಿತ್ತು. ಜತೆಗೆ ಮೂರು ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. 2005ರಲ್ಲಿ ನಡೆದಿದ್ದ ಅಪಘಾತ ಪ್ರಕರಣವೊಂದರಲ್ಲಿ ಕೋರ್ಟ್‌ ಈ ಶಿಕ್ಷೆ ವಿಧಿಸಿತ್ತು. ನಂತರ ಈತನಿಗೆ ಜಾಮೀನು ನೀಡಲಾಗಿತ್ತು. ಜಾಮೀನಿನ ಮೇಲೆ ಹೊರಕ್ಕೆ ಬಂದ ನಂತರ ಎಸ್ಕೇಪ್‌ ಆಗಿದ್ದ.

14 ವರ್ಷ ಅಲ್ಲಲ್ಲಿ ಸುತ್ತುತ್ತಾ ಹಾಯಾಗಿದ್ದ ಈತ. ಇವನ ಹುಡುಕಾಟ ಮಾಡುತ್ತಿದ್ದ ಪೊಲೀಸರಿಗೆ ಕೊನೆಗೂ ಈತ ತಮಿಳುನಾಡಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ವಿಜಯನಗರ ಸಂಚಾರಿ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ವಿಜಯನಗರ ಸಂಚಾರ ಪೊಲೀಸ್‌ ಇನ್ಸ್‌ಪೆಕ್ಟರ್​ ಜಿ.ವೈ. ಗಿರಿರಾಜ್​ ಸಿಬ್ಬಂದಿಗಳಾದ ಹೆಡ್​ ಕಾನ್ಸ್​ಟೇಬಲ್​ ಕೆ.ಪಿ ಮಂಜು, ಕಾನ್ಸ್‌ಟೆಬಲ್‌ಗಳಾದ ರತ್ನದೀಪ್​, ಪ್ರಕಾಶ್‌ ನೇತೃತ್ವದಲ್ಲಿ ಈತನನ್ನು ತಮಿಳುನಾಡಿನ ತಿರ್ಪೂರ್​ನಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಒಂದು ವರ್ಷ ಶಿಕ್ಷೆಯ ಜತೆಗೆ ಈಗ ಚಳ್ಳೇಹಣ್ಣು ತಿನ್ನಿಸಿ ಎಸ್ಕೇಪ್‌ ಆಗಿದ್ದಕ್ಕೆ ಮತ್ತಿಷ್ಟು ಶಿಕ್ಷೆಯಾಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net