ಬೆಂಗಳೂರಿನ ಅಪ್ಪ, ಅಮ್ಮ, ಮಗನನ್ನು ಬಲಿಪಡೆದ ರೀಲ್ಸ್‌ ವ್ಯಾಮೋಹ: ತವರೂರಿಗೆ ಹೊರಟವರು ಬಾರದ ಲೋಕಕ್ಕೆ...

ckbaccident
Published on

ಚಿಕ್ಕಬಳ್ಳಾಪುರ: ಒಂದೇ ಕುಟುಂಬದ ಮೂವರನ್ನು ಅಂದರೆ ಅಪ್ಪ, ಅಮ್ಮ ಮತ್ತು ಮಗನನ್ನು ಬಸ್‌ವೊಂದು ಬಲಿ ಪಡೆದ ಭಾರಿ ದುರಂತದ ಘಟನೆ ಚಿಕ್ಕಬಳ್ಳಾಪುರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಇದೀಗ ಅಪಘಾತದ ಕಾರಣ ಬಹಿರಂಗಗೊಂಡಿದ್ದು, ರೀಲ್ಸ್‌ ವಿಡಿಯೋದ ವ್ಯಾಮೋಹವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಹೀಗೆ ಚಿಕ್ಕಬಳ್ಳಾರಪುದ ಬಳಿ ದಾರುಣವಾಗಿ ಮೃತಪಟ್ಟವರು ಬೆಂಗಳೂರಿನ ಗೌಸ್ ಹಾಗೂ ಅವರ ಪತ್ನಿ ಅಮ್ಮಾಜಾನ್ ಹಾಗೂ ಮಗ ರಿಯಾನ್. ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡೋ ಕೆಲಸ ಮಾಡೋ ಗೌಸ್ ಸ್ಕೂಟಿಯಲ್ಲಿ ಪತ್ನಿ ಹಾಗೂ ಮಗನ ಜೊತೆಯ ಪತ್ನಿಯ ತವರೂರು ಆಂಧ್ರಪ್ರದೇಶದ ಕದಿರಿಗೆ ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ಮಗ ರಸ್ತೆಯ ನಡುವೆಯೇ ರೀಲ್ಸ್‌ ವಿಡಿಯೋ ಮಾಡುತ್ತ ಖುಷಿ ಪಡುತ್ತಿದ್ದ. ಅದನ್ನು ಅಪ್ಪ ನೋಡುತ್ತಲಿದ್ದರು. ಚಿಕ್ಕಬಳ್ಳಾಪುರ ತಾಲೂಕು ರಾಷ್ಟ್ರಿಯ ಹೆದ್ದಾರಿ 44ರ ಹೊನ್ನೇನಹಳ್ಳಿ ಗೇಟ್ ಬಳಿ ಹೋಟೆಲ್ ಸಮೀಪ ಯೂಟರ್ನ್ ಪಡೆದುಕೊಳ್ಳುತ್ತಿದ್ದಾಗ ಅತ್ತ ಕಡೆಯಿಂದ ಖಾಸಗಿ ಬಸ್ಸೊಂದು ಬಂದು ಬೈಕ್‌ ಮೇಲೆ ಹರಿದಿದೆ.

ಅತಿ ವೇಗವಾಗಿ ಬರ್ತಿದ್ದ ಖಾಸಗಿ ಬಸ್ ಹರಿದ ಪರಿಣಾಮ ಸ್ಕೂಟಿ ಬಸ್‌ ಕೆಳಗಡೆ ಸಿಲುಕಿದೆ. ಬಸ್ ರಸ್ತೆ ವಿಭಜಕದ ಮೇಲೆ ಬಂದು ನಿಂತಿದೆ. ಸ್ಕೂಟಿ ಸಮೇತ ಬಸ್ ಸವಾರ ಬಸ್ ಮಧ್ಯ ಭಾಗ  ಸಿಲುಕಿದರೆ, ಮಗ ರಿಯಾನ್ ಮೇಲೆ ಚಕ್ರ ಹರಿದಿದೆ. ಪತ್ನಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು ಮೂವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಅಪಘಾತ ನಂತರ ಖಾಸಗಿ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಮೃತದೇಹಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net