ಸೂಕ್ತ ಸಮಯಕ್ಕೆ ಕಾಯುತ್ತಿದ್ದ ಪೊಲೀಸರ ಕೈಗೆ ರೆಡ್‌ಹ್ಯಾಂಡ್‌ ಸಿಕ್ಕಿಬಿದ್ದರು ಉಡುಪಿಯ ‘ಭ್ರಷ್ಟ’ ಅಧಿಕಾರಿಗಳು!

Birbe
Published on

ಉಡುಪಿ: ಖಾಸಗಿ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಎರಡೂವರೆ ಲಕ್ಷ ರೂಪಾಯಿ ಲಂಚ ಕೇಳಿದ ಆರೋಪ ಹೊತ್ತ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್‌ ಮತ್ತು ಅಧಿಕಾರಿಗಳನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಎಂಜಿನಿಯರ್ ಗುರುಪ್ರಸಾದ್, ಪ್ರಾಧಿಕಾರ ಅಧಿಕಾರಿಗಳಾದ ನಯಿಮಾ ಸಯೀದ್ ಮತ್ತು ಪ್ರಸಾದ್‍ನನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರೊಬ್ಬರಿಂದ 2.50 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲೆಯ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ದಾಳಿ ಮಾಡಿ ಇವರನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದೆ.

ಈ ಆರೋಪಿಗಳ ಮೇಲೆ ಹಿಂದೆ ಕೂಡ ಸಾಕಷ್ಟು ಮಂದಿ ದೂರು ದಾಖಲಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಲಂಚ ಕೊಟ್ಟರೂ ಕೆಲಸ ಮಾಡಿಕೊಡುವುದಿಲ್ಲ ಎಂದು ಹೇಳಲಾಗಿತ್ತು. ಅವರಿಗಾಗಿ ಸೂಕ್ತ ಸಮಯಕ್ಕೆ ಪೊಲೀಸರು ಕಾದು ಕುಳಿತಿದ್ದರು. ಇದೀಗ ಎರಡೂವರೆ ಲಕ್ಷ ರೂಪಾಯಿ ಲಂಚ ಕೇಳುವಾಗ ಮೊದಲೇ ಪ್ಲ್ಯಾನ್‌ ಮಾಡಿದಂತೆ ಬಲೆ ಬೀಸಿ ಭ್ರಷ್ಟ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ನಗರದ ಆದಿ ಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಎಸ್‍ಪಿ ಸೈಮನ್, ಡಿವೈಎಸ್‍ಪಿ ಮಂಜುನಾಥ್ ಕವರಿ ನೇತೃತ್ವದಲ್ಲಿ ಎಸಿಬಿ ಎಸ್‍ಐ ಸತೀಶ್, ರಫೀಕ್ ಎಂ. ದಾಳಿ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net