

ಕಾರ್ಕಳ: ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಲೆ ಕಡಿದರೆ ತಲಾ 10 ಲಕ್ಷ ರೂಪಾಯಿ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪತ್ರ ಹರಿದಾಡುತ್ತಿದೆ. ಮಾರಿಗುಡಿ ಪೇಜಿನಲ್ಲಿ ಈ ರೀತಿಯಾಗಿ ಬಹಿರಂಗ ಬೆದರಿಕೆ ಹಾಕಲಾಗಿದೆ.
ʻಈ ಎರಡು ತಲೆ ಕಡಿದರೆ 20 ಲಕ್ಷ..! ಒಂದು ತಲೆಗೆ 10 ಲಕ್ಷ, ಇನ್ನೊಂದು ತಲೆಗೆ 10 ಲಕ್ಷ. ಕೂಡಲೇ ನಿಮ್ಮ ಖಾತೆಗೆ ಜಮಾ ಆಗುತ್ತದೆʼ ಹೀಗಂತ ಹೇಳಿ ಇಬ್ಬರ ವಿರುದ್ಧ ಕೊಲೆ ಬೆದರಿಕೆ ಹಾಕಲಾಗಿದೆ. 100% ಈ ಎರಡು ತಲೆ ಉರುಳೋದು ಖಚಿತ ಎಂದು ಮಾರಿಗುಡಿ ಎಂಬ ಪೇಜ್ನಲ್ಲಿ ಹೇಳಲಾಗಿದೆ.
ಈ ಸಂಬಂಧ ಕಾಪು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಇನ್ ಸ್ಟಾಗ್ರಾಂ ಪೇಜ್ ವಿರುದ್ಧ ದೂರು ನೀಡಿದ್ದಾರೆ. ಮಾರಿಗುಡಿ ಪೇಜ್ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುತಾಲಿಕ್ ಅವರು, ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಇಂಥದ್ದೊಂದು ಬೆದರಿಕೆ ಬಂದಿರಬಹುದು. ಈ ಹಿಂದಿನಿಂದಲೂ ಟೀಕೆ, ಬೆದರಿಕೆ, ನಿಂದನೆ, ಅಪಪ್ರಚಾರ ಮೆಟ್ಟಿ ನಿಂತು ಈ ಮಟ್ಟಕ್ಕೆ ಬೆಳೆದವನು ನಾನು. ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನನಗೆ ಬೆದರಿಕೆ ಹಾಕಿದವ ಯಾರು ಎಂದು ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಅನ್ಯಮಾರ್ಗದಲ್ಲಿ ಹೋದವನಲ್ಲ. ನಾನು ದುಡಿದು ತಿನ್ನುವವನು. ನಾನು ದೇಶ ರಾಷ್ಟ್ರೀಯತೆ ವಿಚಾರದಲ್ಲಿ ಹಿಂದೆ ಹಾಗೂ ಮುಂದೆ ರಾಜಿಯಾಗಲಾರೆ ಎಂದಿದ್ದಾರೆ.
ಇಂತಹ ಬೆದರಿಕೆ ಹಿನ್ನೆಲೆ ಗನ್ ಮ್ಯಾನ್ ಕೇಳುವ ಪ್ರಮೇಯ ಇಲ್ಲ. ಹಿಂದುತ್ವ ಪರವಾಗಿ, ಸಂಘಟನಾತ್ಮಕವಾಗಿ ಬೆಳೆದು ಬಂದವನು. ಸಾಮಾಜಿಕ ಜೀವನದಲ್ಲಿ ಬಹಳಷ್ಟು ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಪೇಜ್ ಗಳಿಂದ ನಾನು ಹೆದರಿ ಮನೆಯಲ್ಲಿ ಕೂರುವವನಲ್ಲ ಎಂದು ಗುಡುಗಿದ್ದಾರೆ.‘
ಜೀವ ಬೆದರಿಕೆ ಹಾಕಿದರೆ ತಾವು ಹೆದರುವುದಿಲ್ಲ ಎಂದಿರುವ ಯಶ್ಪಾಲ್, ಜಮ್ಮು ಕಾಶ್ಮೀರದ ಉಗ್ರಗಾಮಿ ಬೆಂಗಳೂರಿನಲ್ಲಿ ಹತ್ತು ವರ್ಷದ ಹಿಂದೆ ರಿಕ್ಷಾ ಬಿಡುತ್ತಿದ್ದ. ಹೀಗೆ ಗಡ್ಡ ಬಿಟ್ಟು ಟೋಪಿ ಹಾಕಿ ನಾಟಕ ಮಾಡುವವರು ಇಂತಹ ಪೇಜ್ ಹಿಂದೆ ಇರಬಹುದು. ಹಿಂದುಗಳಿಗೆ ಬೆದರಿಕೆ ಹಾಕಿ ಅವರ ವೇಗ ನಿಯಂತ್ರಣ ಮಾಡಿ ಅವರ ಬೇಳೆ ಬೇಯಿಸುವವರು ಇರಬಹುದು ಎಂದರು.
ಉಡುಪಿ ಜಿಲ್ಲೆ ಸಂಘಟನಾತ್ನಕವಾಗಿದೆ ಯಾವ ಸಂದರ್ಭದಲ್ಲಿ ಹೇಗೆ ಉತ್ತರ ಕೊಡಬೇಕೆಂದು ಗೊತ್ತಿದೆ
ಉಡುಪಿಯಲ್ಲಿ ಹಿಜಾಬ್ ಸಂಘರ್ಷ ನಡೆದಾಗ ಯಶ್ ಪಾಲ್, ಸಿಎಫ್ಐ, ವಿದ್ಯಾರ್ಥಿಗಳನ್ನು ಟೆರರಿಸ್ಟ್ಗಳು ಎಂದಿದ್ದರು. ಕಾನೂನು ಹೋರಾಟದ ನೇತೃತ್ವ ವಹಿಸಿದ್ದರು. ರಾಜ್ಯದ ಧರ್ಮ ದಂಗಲ್ನಲ್ಲಿ ಪ್ರಮೋದ್ ಮುತಾಲಿಕ್ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಈ ಧಮ್ಕಿಗೆ ಕಾರಣ ಎನ್ನಲಾಗಿದೆ. ಈ ವಿಚಾರವನ್ನು ಕಾಪು ಬಿಜೆಪಿ ಯುವ ಮೋರ್ಚಾ ಲಿಖಿತ ರೂಪದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಗಮನಕ್ಕೆ ತಂದಿದೆ.