

ಬೆಂಗಳೂರು: ಕರೊನಾ ಕಾರಣದಿಂದಾಗಿ ಬಹುತೇಕ ಸರ್ಕಾರಿ, ಅನುದಾನಿತ ಹಾಗೂ ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ಕೊಳೆಗೇರಿ ಮಕ್ಕಳು ಶಾಲೆಗೆ ಹೋಗಲಾಗದೇ ಶಿಕ್ಷಣವಂಚಿತರಾಗಿದ್ದಾರೆ, ಎಷ್ಟೋ ಮಂದಿಗೆ ಆನ್‌ಲೈನ್ ಕ್ಲಾಸ್ ಕೂಡ ಅಟೆಂಡ್ ಮಾಡಲು ಆಗಲಿಲ್ಲ. ಅಂಥವರಿಗೆ ರಾಷ್ಟ್ರೋತ್ಥಾನ ಸಂಸ್ಥೆಯ ವತಿಯಿಂದ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ.
ಕರೊನಾ ಕಾರಣದಿಂದ ಯಾವುದೇ ಕಲಿಕೆ ಇಲ್ಲದೇ ಎಲ್ಲಾ ಮಕ್ಕಳನ್ನೂ ಉತ್ತೀರ್ಣಗೊಳಿಸಿರುವ ಹಿನ್ನೆಲೆಯಲ್ಲಿ 10ನೇ ತರಗತಿಯಲ್ಲಿ ಮಕ್ಕಳಿಗೆ ಕಷ್ಟವಾಗುವ ಹಿನ್ನೆಲೆಯಲ್ಲಿ ರಾಷ್ಟ್ರೋತ್ಥಾನ ಸಂಸ್ಥೆಯು ‘10th Sure Pass’ ಕಾರ್ಯಕ್ರಮದ ಮೂಲಕ ತರಬೇತಿ ನೀಡುತ್ತಿದೆ. 10ನೇ ತರಗತಿಯ ಪರೀಕ್ಷೆಯನ್ನು ಸುಲಭದಲ್ಲಿ ಉತ್ತೀರ್ಣಗೊಳಿಸುವ ಉದ್ದೇಶದಿಂದ ಈ ತರಬೇತಿ ನೀಡಲಾಗುತ್ತಿದೆ.
ಮೊದಲನೇ ವಾರದ ತರಗತಿ ಇದಾಗಲೇ ನಡೆದಿದ್ದು, ಶನಿವಾರದಂದು 3 ಗಂಟೆಗಳ ಹಾಗೂ ಭಾನುವಾರದಂದು 7 ಗಂಟೆಗಳ ತರಬೇತಿ ನೀಡಲಾಗಿದೆ. ಬೆಂಗಳೂರಿನ ವಿವಿಧ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳು ತರಬೇತಿಯ ಪ್ರಯೋಜನ ಪಡೆದರು. ತರಗತಿಗಳು ಪ್ರಾರಂಭವಾಗುವ ಮುನ್ನ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ತಿಳಿಯಲು ಕನ್ನಡ, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಪ್ರಾಥಮಿಕ ಹಂತದ ಪರೀಕ್ಷೆಯೊಂದನ್ನು ನೀಡಲಾಯಿತು.
10ನೇ ತರಗತಿಯ ಮಕ್ಕಳಿಗೆ ಗುಣಮಟ್ಟದ ತರಬೇತಿಯೊಂದಿಗೆ ಊಟ, ಸಾರಿಗೆ ವ್ಯವಸ್ಥೆ ಮತ್ತು ಕಲಿಕಾ ಸಾಮಗ್ರಿಗಳನ್ನು ರಾಷ್ಟ್ರೋತ್ಥಾನ ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ.