ಬಿಲ್ಲೇನಹೊಸಹಳ್ಳಿ ಹಾಡಿಗೆ ರಷ್ಯಾದ ಮಾನವ ಶಾಸ್ತ್ರಜ್ಞೆ ಭೇಟಿ

HUN-FEB-13-1(BILLENAHOSAHALLI HADI PROGRAMME)
ಹುಣಸೂರು ತಾಲೂಕು ಬಿಲ್ಲೇನಹೊಸಹಳ್ಳಿ ಹಾಡಿಗೆ ರಷ್ಯಾ ದೇಶದ ಮಾನವಶಾಸ್ತ್ರಜ್ಞೆ ಸ್ವೆತ್ಲಾನ ಭೇಟಿ ನೀಡಿ ಆದಿವಾಸಿ ಮಹಿಳೆಯರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದರು. ವೀಣಾ, ಅಮ್ಮಣ್ಣಿ, ಸೀತೆ ಇತರರಿದ್ದರು.
Published on

ಹುಣಸೂರು: ತಾಲೂಕಿನ ಹನಗೋಡು ಹೋಬಳಿ ಬಿಲ್ಲೇನಹೊಸಹಳ್ಳಿ ಹಾಡಿಗೆ ರಷ್ಯಾದ ಮಾನವ ಶಾಸ್ತ್ರಜ್ಞೆ, ಸಂಶೋಧಕಿ ಸ್ವೆತ್ಲಾನ ಭೇಟಿ ನೀಡಿ ಗಿರಿಜನರ ಬದುಕು ಬವಣೆ ಕುರಿತು ಮಾಹಿತಿ ಪಡೆದರು.

ಬುಧವಾರ ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಅವರ ಜತೆಗೂಡಿ ಬಿಲ್ಲೇನಹೊಸಹಳ್ಳಿ ಹಾಡಿಗೆ ಭೇಟಿ ನೀಡಿದ ಸ್ವೆತ್ಲಾನ, ಹಾಡಿಯಲ್ಲಿ ಬಳಕೆಯಲ್ಲಿರುವ ಸೌರ ಹಾಗೂ ಜೈವಿಕ ಇಂಧನ ವಿದ್ಯುತ್ ಘಟಕವನ್ನು ಗಮನಿಸಿದರು. ಗಿರಿಜನರು ಆರಂಭಿಸಿರುವ ಜೇನು ಸಾಕಣೆ ಕುರಿತು ಅವರಿಂದ ಮಾಹಿತಿ ಪಡೆದರು. ಆದಿವಾಸಿಗಳು ಆಚರಿಸುವ ಕುದುರೆ ಹಬ್ಬದ ವಿಶೇಷತೆಗಳನ್ನು ಆಸಕ್ತಿಯಿಂದ ಆಲಿಸಿ ಸಂಭ್ರಮಿಸಿದರು. ಮಾತ್ರವಲ್ಲದೆ ಮೂಲನಿವಾಸಿ ಬುಡಕಟ್ಟು ಸಮುದಾಯದ ಜೇನುಕುರುಬ ಕುಟುಂಬಗಳೊಡನೆ ಅವರ ಪರಂಪರೆ, ಐತಿಹ್ಯ, ಶ್ರದ್ಧಾ ಕೇಂದ್ರಗಳು, ನಂಬಿಕೆ, ಬುಂಡೆನಾದದ ಚಿಕಿತ್ಸೆ, ಗಿಡಮೂಲಿಕೆ, ಸಮುದಾಯ ನಿರ್ವಹಣೆಯ ರೀತಿ ನೀತಿ ಕುರಿತು ಮಹಿಳೆಯರ ಜತೆ ಚರ್ಚಿಸಿ ಜೇನುಕುರುಬ ಸಮುದಾಯದ ಮಹತ್ವವನ್ನು ಮನವರಿಕೆ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಹಾಡಿಯ ಅಮ್ಮಣ್ಣಿ, ಸೀತೆ ಮುಂತಾದವರು, ಕಾಡಿನಲ್ಲಿ ಪ್ರತ್ಯೇಕ ವಾಗಿರುವುದರಿಂದ ಆಗುವ ಪ್ರಯೋಜನಕ್ಕಿಂತಲೂ ದೇಶದ ಇತರ ಸಮಾಜಗಳೊಡನೆ ಬೆರೆತು, ಶಿಕ್ಷಣ ಪಡೆದು ದೇಶದ ಮುಖ್ಯವಾಹಿನಿ ಜತೆ ನಮ್ಮ ಬದುಕಿನ ಸರಳ ರೀತಿ ಹಂಚಿಕೊಂಡು ಬಾಳುವುದು ಒಳ್ಳೆಯದು ಎನ್ನುವ ಅರಿವು ನಮಗಿದೆ. ಆದರೆ ಹೊರ ಸಮಾಜದಲ್ಲಿನ ಕುಡಿತದ ಹಾವಳಿ ಸೇರಿದಂತೆ ಇನ್ನಿತರ ಆಧುನಿಕ ಭೋಗವಸ್ತುಗಳು ನಮ್ಮ ಯುವಕರ ದಾರಿ ತಪ್ಪಿಸುತ್ತಿದೆ. ಸರ್ಕಾರ ಇಂತಹ ಅನಿಷ್ಟಗಳನ್ನು ನಿಯಂತ್ರಿಸಿ ನಮ್ಮ ಬದುಕಿಗೆ ಪೂರಕವಾಗಿ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.

ಅಪೂರ್ವ ಸಂಸ್ಕೃತಿ: ಆದಿವಾಸಿಗಳೊಂದಿಗೆ ಸಂವಾದ ನಡೆಸಿದ ನಂತರ ಮಾತನಾಡಿದ ಸ್ವೆತ್ಲಾನ, ಜೇನುಕುರುಬ ಸಮುದಾಯ ಸೇರಿದಂತೆ ಭಾರತ ದೇಶದ ಅನೇಕ ಆದಿವಾಸಿ ಸಮುದಾಯದಲ್ಲಿ ವಿಶೇಷ ಶಕ್ತಿ ಇದೆ. ಸಂಪತ್ಭರಿತ ಸಂಸ್ಕೃತಿಗಳನ್ನು ಹೊಂದಿದ್ದಾರೆ. ಇವರ ಶಕ್ತಿ ಮತ್ತು ಯುಕ್ತಿ ದೇಶದ ಅಭಿವೃದ್ಧಿಗೋಸ್ಕರ ಸದ್ಬಳಕೆಯಾಗಬೇಕಿದೆ ಎಂದರು.

ಡೀಡ್ ಸಂಸ್ಥೆಯ ಡಾ.ಎಸ್.ಶ್ರೀಕಾಂತ್ ಭಾಷಾ ತರ್ಜುಮೆ ಮಾಡುವ ಮೂಲಕ ಸಂವಾದ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net