

ಆಲೂರು: ಗ್ರಾಮೀಣ ಭಾಗದಲ್ಲಿ ತಯಾರಿಸುವ ಆಹಾರ ಪದಾರ್ಧಗಳು ಆರೋಗ್ಯಯುತವಾಗಿರುತ್ತವೆ ಎಂದು ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಟಿ.ಪಿ. ಪುಟ್ಟರಾಜು ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಒಂದು ವಾರದಿಂದ ನಡೆಯುತ್ತಿರುವ ಹಳ್ಳಿ-ಹಬ್ಬದ ಶೀರ್ಷಿಕೆಯಡಿ ಕಾರ್ಯಕ್ರಮದ ಅಂಗವಾಗಿ ಶನಿವಾರ ನಡೆದ ಹಳ್ಳಿಯೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಮನೆ ಸಮೀಪದಲ್ಲೇ ಬೆಳೆದ ತರಕಾರಿ, ಸೊಪ್ಪುಗಳನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಶುದ್ಧ ಹಾಲು, ಮೊಸರು, ಮಜ್ಜಿಗೆ ಸವಿಯುತ್ತಾರೆ. ವಿಶೇಷವೆಂದರೆ ಸೊಪ್ಪು-ತರಕಾರಿಗಳು ಸಾವಯವವಾಗಿಯೇ ಉತ್ಪತ್ತಿಯಾಗುತ್ತವೆ ಇದು ಆರೋಗ್ಯ ವೃದ್ಧಿಗೆ ಸಹಕಾರಿ ಎಂದರು.
ಎನ್‌ಎಸ್‌ಎಸ್ ಸಂಚಾಲಕ ಶಿವಪ್ರಸಾದ್ ಮಾತನಾಡಿ, ಹೆದ್ದಾರಿಗಳ ಬದಿಯಲ್ಲಿ ಹಳ್ಳಿ ಅಡುಗೆ, ಒಲೆ ಅಡುಗೆ ಊಟ ಎಂದು ನಾಮಫಲಕ ಹಾಕಿರುವುದನ್ನು ಗಮನಿಸಿದರೆ, ಹಳ್ಳಿಗಳಲ್ಲಿ ತಯಾರು ಮಾಡುವ ಅಡುಗೆ ಆರೋಗ್ಯಕರವಾದುದು ಎಂಬುದನ್ನು ಬಿಂಬಿಸುತ್ತದೆ. ಹಳ್ಳಿ ನಡವಳಿಕೆಗಳನ್ನು ಮರೆಯದೆ ಅವಕಾಶ ಸಿಕ್ಕಾಗ ಅನುಭವಿಸುದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಹಾಲು, ಮೊಸರು, ಮಜ್ಜಿಗೆ, ರೊಟ್ಟಿ, ಚಟ್ನಿ, ಅನ್ನ-ಸಾಂಬಾರು, ಬಿರಿಯಾನಿ, ಪಾಯಸ, ಜಾಮೂನು ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶನ ಮಾಡಿ, ಸಹಪಾಠಿಗಳಿಗೆ ಹಂಚಿ ತಿಂದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಪುರುಷೋತ್ತಮ, ಆರ್.ವಿ. ಮನು, ಕಚೇರಿ ಅಧೀಕ್ಷಕ ರವಿಪ್ರಕಾಶ್, ಉಪನ್ಯಾಸಕ ವನಜಾಕ್ಷಿ, ಮಮತಾ, ವತ್ಸಲಾ, ವೀಣಾ ಇತರರು ಇದ್ದರು.
ಆಲೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ಹಳ್ಳಿ-ಹಬ್ಬದ ಶೀರ್ಷಿಕೆಯಡಿಯಲ್ಲಿ, ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು. ಪ್ರಾಂಶುಪಾಲ ಟಿ. ಪಿ. ಪುಟ್ಟರಾಜು ಉದ್ಘಾಟಿಸಿದರು.