

ಬೆಟ್ಟದಪುರ: ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ. ಸೋಲು-ಗೆಲುವು ಗಣನೆಗೆ ತೆಗೆದುಕೊಳ್ಳದೆ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಬೆಟ್ಟದಪುರದ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಹಾಗೂ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತರಬೇಕು ಎಂದರು.
ಒಕ್ಕಲಿಗ ಬ್ರಿಗೇಡ್ ಸಂಸ್ಥಾಪಕ ನಂಜೇಗೌಡ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಸೋಲಿನಿಂದ ಎದೆಗುಂದದೆ ನಿರಂತರ ಪರಿಶ್ರಮಪಟ್ಟರೆ ಗೆಲುವು ಸಾಧ್ಯವಾಗುತ್ತದೆ. ಮೊದಲು ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಾಲೂಕಿನ ಯಾವುದೇ ಸರ್ಕಾರಿ ಶಾಲೆಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆ ಮಾಡಲು ಮುಂದಾದರೆ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಭಾಗವಹಿಸಿದ್ದ ಸುಮಾರು ಒಂದು ಸಾವಿರ ಮಕ್ಕಳಿಗೆ ಕ್ಯಾಪ್, ಎಲ್ಲ ಶಾಲೆಯ ಶಿಕ್ಷಕರಿಗೆ ಜರ್ಸಿ, ಬ್ಯಾಡ್ಜ್ ನೀಡಲಾಯಿತು. ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಹೋಳಿಗೆ ಊಟ ಆಯೋಜಿಸಲಾಗಿತ್ತು.
ಹಾಸನಮ್ಮ ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವ್, ಸದಸ್ಯ ರಾಜೇಂದ್ರ, ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಬಿ.ಜೆ.ದೇವರಾಜು, ಸೊಸೈಟಿ ಅಧ್ಯಕ್ಷೆ ನಟೇಶ್, ಮುಖಂಡರಾದ ಕುಂಜಪ್ಪ ಕಾರ್ನಾಡ್, ಬಿ.ಟಿ.ಸಣ್ಣಸ್ವಾಮಿ, ಇಂಜಿನಿಯರ್ ರಮೇಶ್, ದಿನೇಶ್, ಸಹಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಗ್ರಾಪಂ ಸದಸ್ಯ ಗಿರಿಗೌಡ, ಪಿಡಿಒ ಮಂಜುನಾಥ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ಉಪಪ್ರಾಂಶುಪಾಲ ಮಂಜೇಗೌಡ, ಶಿಕ್ಷಕರಾದ ಗೊರಳ್ಳಿ ಜಗದೀಶ್, ಆಲನಹಳ್ಳಿ ಕೆಂಪರಾಜು, ವಲಯ ಮಟ್ಟದ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು.