

ಮದ್ದೂರು: ಸುಡು ಬಿಸಿಲನ್ನು ಲೆಕ್ಕಿಸದೆ ಓಡಿದರು, ಸೈಕಲ್ ಬಂಡಿ ಹೊಡೆದರು, ಗೋಣಿ ಚೀಲ ಓಟದಲ್ಲಿ ಜಿಗಿದರು… ಓಡಿ, ಆಡಿ ಸುಸ್ತಾದ ವಿದ್ಯಾರ್ಥಿನಿಯರು…
ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ವತಿಯಿಂದ ಗುರುವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ಕಂಡ ಬಂದ ದೃಶ್ಯಗಳಿವು.
ಗ್ರಾಮೀಣ ಕ್ರೀಡೆಗಳನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟದಲ್ಲಿ ಗೋಣಿ ಚೀಲದ ಓಟದ ಸ್ಪರ್ಧೆ, ಲೆಮನ್ ಇನ್ ದಿ ಸ್ಪೂನ್, ಮ್ಯೂಸಿಕಲ್ ಛೇರ್, ಒಂಟಿ ಕಾಲಿನ ಓಟ, ಬಂಡಿ ಹೊಡೆಯುವ ಸ್ಪರ್ಧೆ, ಕೂಸುಮರಿ ಓಟ, ಹಿಮ್ಮುಖ ಓಟ ಸೇರಿದಂತೆ ಹಲವು ಕ್ರೀಡೆಗಳಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡು ಸಂಭ್ರಮಿಸಿದರು. ಹಿಂಬದಿ ಓಟದಲ್ಲಿ ಹಿಮ್ಮುಖವಾಗಿ ಓಡಿ ಗಮನ ಸೆಳೆದರು. ಒಂಟಿ ಕಾಲಿನ ಓಟದಲ್ಲಿ ಭಾಗವಹಿಸಿ ಗಮನ ಸೆಳೆದರು. ಗೆದ್ದವರು ಬಹುಮಾನ ಪಡೆದರು. ಸೋತವರು ಕ್ರೀಡಾ ಸ್ಫೂರ್ತಿ ಮೆರೆದರು. ಕ್ರೀಡಾಕೂಟದಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸುಡುವ ಬಿಸಿಲನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದರು.
ಮನ್‌ಮುಲ್ ನಿರ್ದೇಶಕಿ ರೂಪಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದ್ದ ಅಪ್ಪಟ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿವೆ. ಮುಂದಿನ ದಿನಗಳಲ್ಲಿ ಇತಿಹಾಸ ಪುಟ ಸೇರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಇದಕ್ಕೆ ಅವಕಾಶ ನೀಡದೆ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕಿದೆ ಎಂದು ಹೇಳಿದರು.
ಎರಡು, ಮೂರು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳ ಅವಿಭಾಜ್ಯ ಅಂಗವಾಗಿದ್ದ ಗ್ರಾಮೀಣ ಕ್ರೀಡೆಗಳಾದ ಚಿನ್ನಿದಾಂಡು, ಲಗೋರಿ, ಸಾಲು ಚೆಂಡು, ಹಗ್ಗ ಜಗ್ಗಾಟ, ಗೋಲಿ, ಕುಂಟಪಿಲ್ಲೆ, ಕಪ್ಪೆ ಓಟ, ಕೆಸರು ಗದ್ದೆ ಓಟ, ಮರಕೋತಿ, ಚನ್ನೆಮಣೆ, ಕವಡೆ ಮುಂತಾದ ಆಟಗಳು ಇಂದು ಮರೆಯಾಗುತ್ತಿರುವುದು ಆತಂಕಕಾರಿ ಎಂದರು.
ಈಗ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡುವ ಸಂದರ್ಭ ಬಂದಿದೆ. ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಆಟವನ್ನು ಮನೆ ಮಂದಿಯೆಲ್ಲ ಒಂದೆಡೆ ಕುಳಿತು ವೀಕ್ಷಿಸಿ ಸಂಭ್ರಮಪಟ್ಟು, ಪ್ರೋತ್ಸಾಹ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪಾಲಕರಿಗೂ ಗ್ರಾಮೀಣ ಕ್ರೀಡೆಗಳ ಬಗ್ಗೆ ನಿರುತ್ಸಾಹ ತುಂಬಿದೆ. ಕೇವಲ ಮಕ್ಕಳ ಓದು, ಬರಹದ ಬಗ್ಗೆ ಆಸಕ್ತಿ ವಹಿಸುವ ಪರಿಪಾಠ ಹೆಚ್ಚಾಗಿರುವುದು ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ಮದ್ದೂರು ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಮಾನಸಿಕ, ದೈಹಿಕ ಬೆಳವಣಿಗೆಗೆ ಪೂರಕವಾಗುವ ಗ್ರಾಮಾಂತರ ಪ್ರದೇಶದ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಯುವಜನಾಂಗ ಕ್ರಿಕೆಟ್‌ನತ್ತ ಚಿತ್ತ ಹರಿಸುತ್ತಿರುವುದರಿಂದ ದೇಸಿ ಕ್ರೀಡೆಗಳು ಮಾಯವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಮಹತ್ವ ಬರುತ್ತಿದ್ದು ಅದಕ್ಕೆ ಕಬಡ್ಡಿ ಉದಾಹರಣೆ ಎಂದು ಹೇಳಿದರು.
ಗ್ರಾಮೀಣ ಕ್ರೀಡೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ ನಮ್ಮ ಮಕ್ಕಳಿಗೆ ಚಿತ್ರಗಳ ಮೂಲಕ ತೋರಿಸಬೇಕಾಗುತ್ತದೆ. ಮೊಬೈಲ್, ಟಿವಿ, ಕಂಪ್ಯೂಟರ್, ವಿಡಿಯೋ ಗೇಮ್‌ಗಳಿಗೆ ಒಗ್ಗಿಕೊಂಡಿರುವ ಮಕ್ಕಳು, ಯುವ ಜನಾಂಗಕ್ಕೆ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಅವುಗಳ ಮಹತ್ವ ತಿಳಿಸಲು ಮುಂದಾಗಿರುವುದು ಶ್ಲಾಘನೀಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಜಯವಾಣಿ ಗ್ರಾಮೀಣ ಕೂಟ ಆಯೋಜಿಸಿರುವುದು ತುಂಬಾ ಖುಷಿ ತಂದಿದೆ. ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿರುವುದು ಮತ್ತಷ್ಟು ಸಂತಸ ತಂದಿದೆ. ಇಂತಹ ಗ್ರಾಮೀಣ ಕ್ರೀಡಾಕೂಟಗಳನ್ನು ಹೆಚ್ಚು ಆಯೋಜನೆ ಮಾಡುವ ಮೂಲಕ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಮುಂದಾಗಿರುವ ವಿಜಯವಾಣಿ ಪತ್ರಿಕೆ ಕಾರ್ಯ ಶ್ಲಾಘನೀಯ.
ಸದಾ ಓದಿನಲ್ಲೇ ಮುಳುಗಿದ್ದ ನಮಗೆ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಖುಷಿ ನೀಡಿದೆ. ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕಾಗಿರುವುದು ಯುವ ಜನಾಂಗದ ಜವಾಬ್ದಾರಿ. ಸೋಲು-ಗೆಲುವು ಲೆಕ್ಕ ಹಾಕದೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಬಹುದು.
ಬಹುಮಾನ ವಿಜೇತರು
ಬಂಡಿ ಹೊಡೆಯುವ ಸ್ಪರ್ಧೆ: ಹರ್ಷಿತಾ ಪ್ರಥಮ ಬಿಎ (ಪ್ರ), ಆರ್.ಪಿ.ಮೇಘನಾ ಪ್ರಥಮ ಬಿಸಿಎ (ದ್ವಿ), ಎನ್.ಕಾವ್ಯಾ ಪ್ರಥಮ ಬಿಎ(ತೃ).
ಗೋಣಿ ಚೀಲ ಓಟದ ಸ್ಪರ್ಧೆ: ಆರ್.ಪಿ. ಮೇಘನಾ ಪ್ರಥಮ ಬಿಎ (ಪ್ರ), ಎಂ.ಎ.ಅರ್ಪಿತಾ ತೃತಿಯ ಬಿಕಾಂ (ದ್ವಿ), ಎಂ.ಎನ್.ನಮ್ರತಾ ಪ್ರಥಮ ಬಿಸಿಎ (ತೃ).
ಲೆಮನ್ ಇನ್ ದ ಸ್ಪೂನ್: ಬಿ.ಕೆ.ಪುಷ್ಪಾ ಪ್ರಥಮ ಬಿಎ (ಪ್ರ), ಎ.ಬಿ.ಸೌಜನ್ಯಾ ತೃತಿಯ ಬಿಕಾಂ (ದ್ವಿ), ಎನ್.ಸ್ಪಂದನಾ ಪ್ರಥಮ ಬಿಎ (ತೃ).
ಕೂಸುಮರಿ ಓಟ; ಬಿ.ಆರ್.ಅಮೂಲ್ಯಾ, ಎ.ಸಿ.ಪೃಥ್ವಿ ಅಂತಿಮ ಬಿಕಾಂ (ಪ್ರ), ವಿ.ಆರ್.ಚಂದನಾ, ಕೆ.ಸಿ.ತನುಶ್ರೀ ಅಂತಿಮ ಬಿಕಾಂ (ದ್ವಿ), ಎ.ಆರ್.ನೇತ್ರಾವತಿ, ಬಿ.ತೇಜಸ್ವಿನಿ ಅಂತಿಮ ಬಿಸಿಎ (ತೃ).
ಒಂಟಿ ಕಾಲಿನ ಓಟ: ಎಂ.ಎನ್.ಪೂಜಾಶ್ರೀ ಅಂತಿಮ ಬಿಎ (ಪ್ರ), ಎಂ.ಎ.ಅರ್ಪಿತಾ ಅಂತಿಮ ಬಿಕಾಂ (ದ್ವಿ), ಬಿ.ರಕ್ಷಿತಾ ಅಂತಿಮ ಬಿಕಾಂ (ತೃ).
ಹಿಮ್ಮುಖ ಓಟ: ವಿ.ಆರ್.ಚಂದನಾ ಅಂತಿಮ ಬಿಕಾಂ (ಪ್ರ), ಎಂ.ಎ.ಅರ್ಪಿತಾ ಅಂತಿಮ ಬಿಕಾಂ (ತೃ), ಎಂ.ಎನ್.ಪೂಜಾಶ್ರೀ ಅಂತಿಮ ಬಿಎ (ತೃ).
ಮ್ಯೂಸಿಕಲ್ ಚೇರ್: ಎಚ್.ಆರ್.ಮಂಗಳಾ ದ್ವಿತೀಯ ಬಿಸಿಎ (ಪ್ರ), ಎಸ್.ದೀಕ್ಷಿತಾ ಪ್ರಥಮ ಬಿಕಾಂ (ದ್ವಿ), ವಿ.ಆರ್.ಚಂದನಾ ಅಂತಿಮ ಬಿಕಾಂ (ತೃ) ಬಹುಮಾನ ಪಡೆದರು.