

ಗುಂಡ್ಲುಪೇಟೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮಾಜದ ಬಡವರು, ರೈತರು, ನೊಂದವರಿಗೆ ಅಗತ್ಯ ನೆರವು ದೊರಕುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಮತ್ತು ಸ್ವ-ಸಹಾಯ ಸಂಘಗಳ ಮೂಲಕ ಕೌಶಲ ತರಬೇತಿ ನೀಡಿ ಸ್ವಾವಲಂಬಿ ಜೀವನಕ್ಕೆ ನೆರವು ನೀಡಲಾಗುತ್ತಿದೆ. ಸಮಾಜದಲ್ಲಿನ ಬಡವರು, ರೈತರು, ನೊಂದವರಿಗೆ ನೆರವು ಲಭಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಯೋಜನೆಯ ವತಿಯಿಂದ ಕೆರೆಗಳ ಅಭಿವೃದ್ಧಿ, ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಅಸಹಾಯಕ ಹಾಗೂ ಅಂಗವಿಕಲರಿಗೆ ಮಾಸಾಶನ ಮುಂತಾದ ಅನುದಾನಿತ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮೂಡುಗೂರಿನ ಉದ್ದಾನೇಶ್ವರ ವಿರಕ್ತ ಮಠದ ಇಮ್ಮಡಿ ಉದ್ಧಾನ ಸ್ವಾಮೀಜಿ ಆಶೀರ್ವಚನ ನೀಡಿದರು. ಯೋಜನೆಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಲಕ್ಕೂರು ಬಸವರಾಜಪ್ಪ, ತೆರಕಣಾಂಬಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಮಾದಪ್ಪ, ಎಪಿಎಂಸಿ ಸದಸ್ಯ ಪಿ.ಮಹದೇವಪ್ಪ, ಪಿಎಸ್‌ಐ ಈಶ್ವರ್, ಬಲಚವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ಸೇವಾ ಪ್ರತಿನಿಧಿಗಳು, ಸ್ವ-ಸಹಾಯ ಸಂಘ ಹಾಗೂ ಪ್ರಗತಿ ಬಂಧು ಸಂಘದ ಸದಸ್ಯರು ಇದ್ದರು.