ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ

ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ
Published on

ಶನಿವಾರಸಂತೆ: ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ನಶಿಸಿ ಹೋಗಲು ಬಿಡಬಾರದು ಎಂದು ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಎನ್.ಹರೀಶ್ ಹೇಳಿದರು.

ಕೊಡಗು-ಹಾಸನ ಗಡಿಭಾಗದ ಹೊಸೂರು ಗ್ರಾಮದಲ್ಲಿರುವ ಶ್ರೀ ಬೆಟ್ಟದ ಬಸವೇಶ್ವರ ಸ್ವಾಮಿಯ ವಾರ್ಷಿಕ ಪೂಜಾ ಮಹೋತ್ಸವ ಅಂಗವಾಗಿ 600 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕೌಟೆಕಾಯಿ ಜಾತ್ರೋತ್ಸವ ಕಾರ್ಯಕ್ರಮ ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಕೌಟೆಕಾಯಿ ಬಳ್ಳಿ ಹೇರಳವಾಗಿ ಬೆಳೆಯುತಿತ್ತು ರೈತರು ಕೌಟೆಕಾಯಿ ಬಳ್ಳಿಯಿಂದ ಸಾವಯವ ಗೊಬ್ಬರ ಮಾಡುತ್ತಿದ್ದರು. ಅಲ್ಲದೆ, ಕೌಟೆಕಾಯಿಯನ್ನು ರೋಗ-ರುಜಿನಗಳಿಗೆ ಔಷಧವಾಗಿ ಉಪಯೋಗಿಸುತ್ತಿದ್ದರು. ವೈಜ್ಞಾನಿಕತೆಯ ಭರಾಟೆಯಿಂದ ಜಾನುವಾರುಗಳ ಸಾಕಣೆ ಕಡಿಮೆಯಾಗುವ ಜತೆಗೆ ಸಾವಯವ ಗೊಬ್ಬರ ಕೂಡ ಕಡಿಮೆಯಾಗಿದೆ. ಇದರಿಂದ ಕೌಟೆಕಾಯಿ ಸಸ್ಯ ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ರೈತರು ಹಾಗೂ ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ಗೌರವಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್ ಮಾತನಾಡಿ, ಹಳ್ಳಿಗಳಲ್ಲಿ ನಡೆಯುವ ಉತ್ಸವ, ಜಾತ್ರೋತ್ಸವ ಮುಂತಾದ ಸಂಸ್ಕೃತಿ ಗ್ರಾಮೀಣ ಭಾಗದ ಸೊತ್ತಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಉತ್ಸವಗಳಿಗೆ ಹಲವಾರು ಅರ್ಥಗಳಿರುತ್ತದೆ. ಈ ದಿಸೆಯಲ್ಲಿ ನೂರಾರು ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಗ್ರಾಮೀಣ ಭಾಗದ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಹಾಕಿ ತರಬೇತುದಾರರಾದ ದೇವರಾಜಮ್ಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದು ಸಮಾಜ ಬದಲಾಗುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಮಾನವಿಯ ಮೌಲ್ಯಗಳು ಉಳಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ಸವಗಳು ಜೀವಂತವಾಗಿದೆ ಎಂದರು. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕು. ಪಾಲಕರು ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಗಮನಹರಿಸಬೇಕು ಎಂದು ಹೇಳಿದರು.

ದೇವಸ್ಥಾನ ಮತ್ತು ಜಾತ್ರಾ ಸಮಿತಿ ಅಧ್ಯಕ್ಷ ಕಾಂತರಾಜ್ ಅಧ್ಯಕ್ಷತೆ ವಹಿಸಿದ್ದರು. ಜಾತ್ರ ಸಮಿತಿಯ ಹೊಸೂರು ರಮೇಶ್ ಕೌಟೆಕಾಯಿ ಜಾತ್ರೆ ಹಿನ್ನೆಲೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.

ಹೊಸೂರು ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಮಂಜುನಾಥ್, ಶನಿವಾರಸಂತೆ ಕಾವೇರಿ ವಿದ್ಯಾಸಂಸ್ಥೆಯ ಉಪನ್ಯಾಸಕ ಅಶ್ವಥ್, ದೇವಾಲಯ ಮತ್ತು ಜಾತ್ರಾ ಸಮಿತಿ ಪದಾಧಿಕಾರಿಗಳು ಇದ್ದರು.

ಬೆಳಗ್ಗೆ 7 ಗಂಟೆಯಿಂದ ಬೆಟ್ಟದ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ದೇವಾಲಯ ಸಮಿತಿ ವತಿಯಿಂದ ತಡಕಲು ಗ್ರಾಮದ ಹಿರಿಯ ನಾಗರಿಕ ಜಿ.ಎ.ನಾಗರಾಜ್, ಕೌಕೋಡಿ ಗ್ರಾಮದ ಹಿರಿಯ ನಾಗರಿಕ ಎಚ್.ಎನ್.ಗೋವಿಂದೇಗೌಡ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net