ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಪೌಷ್ಟಿಕತೆ ದೊರಕಿಸಲು ಮೊಟ್ಟೆ ವಿತರಣೆ

hnl egg vitarane aug
Published on

ಹೊನ್ನಾಳಿ: ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾಚಿಕ್ಕಿ ವಿತರಿಸುವ ಯೋಜನೆಗೆ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಸಕ ಡಿ.ಜಿ. ಶಾಂತನಗೌಡ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಪೌಷ್ಟಿಕತೆ ದೊರೆಯಬೇಕೆಂದು ಶಾಲಾ ಮಕ್ಕಳಿಗೆ ಮೊಟ್ಟೆ ಇನ್ನಿತರ ಆಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಮೊದಲು 1 ರಿಂದ 8 ನೇ ತರಗತಿವರೆಗೆ ಮಾತ್ರ ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾ ಚಿಕ್ಕಿ ನೀಡಲಾಗುತ್ತಿತ್ತು. ಆದರೆ, ನಮ್ಮ ಸರ್ಕಾರ ಬಂದ ತಕ್ಷಣ ಈ ಯೋಜನೆಯನ್ನು 10 ನೇ ತರಗತಿವರೆಗೂ ವಿಸ್ತರಿಸಲಾಗಿದೆ.

9 ಹಾಗೂ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದು ವಿವರಿಸಿದರು.

9 ಹಾಗೂ 10ನೇ ತರಗತಿಗೂ ಪೌಷ್ಟಿಕಾಂಶ ಆಹಾರ

ಬಿಇಒ ನಂಜರಾಜ್ ಮಾತನಾಡಿ, ಪ್ರಧಾನಮಂತ್ರಿ ಪೋಷಣೆ ಶಕ್ತಿ ನಿರ್ಮಾಣ ಯೋಜನೆಯಡಿ ಕೇಂದ್ರ ಸರ್ಕಾರ ಶೇ.60 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 40 ರಷ್ಟು ಅನುದಾನ ನೀಡುತ್ತದೆ ಮತ್ತು ಈಗ ರಾಜ್ಯ ಸರ್ಕಾರ 9 ಹಾಗೂ 10ನೇ ತರಗತಿಗೂ ಪೌಷ್ಟಿಕಾಂಶ ಆಹಾರ ನೀಡಲು ಸಂಪೂರ್ಣ ವೆಚ್ಚ ಭರಿಸುತ್ತಿದೆ ಎಂದರು.

ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ 1 ರಿಂದ 10ನೇ ತರಗತಿಯ 23,400 ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಬಾರಿ ಪ್ರತಿ ಊಟದ ಜತೆ ಬೇಯಿಸಿದ ಮೊಟ್ಟೆ, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲಾಗುತ್ತದೆ ಎಂದು ವಿವರಿಸಿದರು.

ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ, ಪ್ರೌಢಶಾಲೆ ಮುಖ್ಯಶಿಕ್ಷಕ ರಂಗನಾಥ್, ಎಸ್‌ಡಿಎಂಸಿ ಸದಸ್ಯರಾದ ಮಂಜುನಾಥ್, ಪ್ರಕಾಶ್, ನಳಿನಾ, ಲೀಲಾ, ಕರಿಬಸಪ್ಪ, ಅಹ್ಮದ್, ಶಿಕ್ಷಕ ರವಿಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net