

ಬೆಂಗಳೂರು: ಸಾಮಾಜಿಕ ಜಾಲತಾಣ ಅಂದಮೇಲೆ ಅಲ್ಲೊಂದು ವೈರಲ್ ಸುದ್ದಿಗಳು ಇರಲೇಬೇಕು. ಅಕಸ್ಮಾತ್ ಇಲ್ಲವಾದರೆ, ಯಾವುದಾದರೂ ಒಂದು ದೃಶ್ಯ ಕ್ಷಣಮಾತ್ರದಲ್ಲಿ ನೆಟ್ಟಿಗರ ಗಮನಸೆಳೆದು, ಆ ಸ್ಥಾನವನ್ನು ಅಲಂಕರಿಸುತ್ತದೆ. ಈ ಸಾಲಿಗೆ ಆಹಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು (Viral Video), ನೋಡುಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.
ಅಸಲಿಗೆ ಮದ್ಯ ಮತ್ತು ಸ್ವೀಟ್ ಪ್ರಿಯರಿಗೆ ಈ ವಿಡಿಯೋ ಬಹಳ ಇಷ್ಟವಾಗಲಿದೆ. ಸಣ್ಣ ಪಾರ್ಟಿ ಎಂದು ಮನಬಂದಂತೆ ಎಣ್ಣೆ ಕುಡಿದು, ತೇಲಾಡುವ ಮದ್ಯಪ್ರಿಯರು, ಬಿಯರ್ಗಿಂತಲೂ ಹೆಚ್ಚಾಗಿ ಹಾಟ್ ಡ್ರಿಂಕ್ಸ್ ಇಷ್ಟಪಡುತ್ತಾರೆ. ಜತೆಗೆ ಇದು ಹಲವರ ಉತ್ತಮ ಆಯ್ಕೆ ಕೂಡ. ಪ್ರತ್ಯೇಕವಾಗಿ ಏಕೆ ಎಂಬುದಕ್ಕೆ ಅವರದ್ದೇ ಆದ ಕಾರಣಗಳಿವೆ. ಸದ್ಯ ಈ ವಿಡಿಯೋದಲ್ಲಿ ಹಾಟ್ ಪ್ರಿಯರು ರಮ್ ಅಥವಾ ವಿಸ್ಕಿಯನ್ನು ಅಧಿಕ ಸಂಖ್ಯೆಯಲ್ಲಿ ಸೇವಿಸುತ್ತಾರೆ. ಇದರಲ್ಲಿ ಕಿಕ್ ಸಿಗಲಿ ಎಂದು ಕೆಲವರು 'ಓಲ್ಡ್ ಮಾಂಕ್' ಅಥವಾ 'ಬಕಾರ್ಡಿ' ಕುಡಿತಾರೆ. ಅಸಲಿಗೆ ಇದೇ ರಮ್, ಸಿಹಿ ಸಿಹಿಯಾದ ಗುಲಾಬ್ ಜಾಮೂನ್ ಜತೆಗೆ ಸಿಕ್ಕರೆ ಹೇಗೆ?
ಸ್ವೀಟ್ ಮತ್ತು ಮದ್ಯಕ್ಕೂ ಅಜಗಜಾಂತರ! ಮದ್ಯಪಾನ ಮಾಡುವವರು ಹೆಚ್ಚಾಗಿ ಖಾರ ಅಥವಾ ಗರಂ ಗರಂ ಚಿಪ್ಸ್ ಇಲ್ಲವೇ ಇತರೆ ಡಿಶ್ಗಳನ್ನು ಜತೆಯಲ್ಲಿ ಸೇವಿಸುತ್ತಾರೆಯೇ ಹೊರತು ಸಿಹಿಯೊಂದಿಗೆ ಅಲ್ಲ. ಇದು ಅನೇಕರಿಗೂ ತಿಳಿದಿರುವ ಸಂಗತಿಯೇ. ಆದರೆ, ಇಲ್ಲೊಂದು ವೈರಲ್ ವಿಡಿಯೋದಲ್ಲಿ ಗುಲಾಬ್ ಜಾಮೂನ್ಗೆ ಎರಡರಿಂದ ಮೂರು ಹನಿಗಳು ರಮ್ ಮಿಶ್ರಣ ಮಾಡಿ, ಗ್ರಾಹಕರಿಗೆ ಕೊಡಲಾಗುತ್ತಿದೆ. ಈ ದೃಶ್ಯ ಕೆಲವರಿಗೆ ಅಚ್ಚರಿ ಮೂಡಿಸಿದರೆ, ಇನ್ನೂ ಕೆಲವರಿಗೆ ಬಾಯಲ್ಲಿ ನೀರು ತರಿಸಿದೆ. ಒಂದಷ್ಟು ಜನ ವಿಡಿಯೋ ಮೆಚ್ಚಿದ್ದು, ರಮ್+ ಗುಲಾಬ್ ಜಾಮೂನ್= ಸ್ವರ್ಗ ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).