ಮಗನ ಮಡಿಲು ಸೇರಿದ ತಾಯಿ ಶೇಕಮ್ಮ; ದನದ ಕೊಟ್ಟಿಗೆಯಲ್ಲಿ ವಾಸವಿದ್ದ ವೃದ್ದೆ ಶೇಕಮ್ಮನ ವನವಾಸಕ್ಕೆ ಮುಕ್ತಿ

18 HVR 3 C
Published on

ಹಾವೇರಿ: ಇಲ್ಲಿನ ವಿದ್ಯಾನಗರ ಪಶ್ಚಿಮ ಬಡಾವಣೆಯ ಉದ್ಯಾನವನದಲ್ಲಿ ದನದ ಕೊಟ್ಟಿಗೆಯಂಥ ಗುಡಿಸಿಲಲ್ಲಿ ವಾಸವಾಗಿದ್ದ 70 ವರ್ಷದ ವೃದ್ಧೆ ಶೇಕಮ್ಮ ಯಲ್ಲಪ್ಪ ಅರಳಿಹೊಂಡ ಅವರ ವನವಾಸಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಶೇಕಮ್ಮ ಮಗನ ಮಡಿಲು ಸೇರಿದ್ದಾರೆ.

ಅಭಿವೃದ್ಧಿಯನ್ನೇ ಕಾಣದ ಪಾರ್ಕ್‌ನಲ್ಲಿ ಶೇಕಮ್ಮ 50 ವರ್ಷಗಳಿಂದ ದನದ ಕೊಟ್ಟಿಗೆಯಂಥ ಸಣ್ಣ ಗುಡಿಸಲು ಹಾಕಿಕೊಂಡು, ಅದರಲ್ಲೇ ಎಮ್ಮೆಯೊಂದನ್ನು ಕಟ್ಟಿಕೊಂಡು ಹಾಲು ಮಾರುತ್ತ ದಯನೀಯವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಸ್ಥಳೀಯ ನಗರಸಭೆ ಸದಸ್ಯರು ಸೇರಿದಂತೆ ಯಾರೊಬ್ಬರೂ ಇವರ ಸಮಸ್ಯೆಗೆ ಸ್ಪಂದಿಸಿರಲಿಲ್ಲ. ಆಶ್ರಯ ಯೋಜನೆಯಡಿ ಮನೆ ಕೊಡಿಸುತ್ತೇನೆ ಎಂದು ಕೆಲವರು ಶೇಕಮ್ಮನಿಂದಲೇ 15 ಸಾವಿರ ರೂ. ಪಡೆದು ಈವರೆಗೆ ಮನೆ ಕೊಡಿಸಿರಲಿಲ್ಲ.

ಈ ಕುರಿತು ‘ದನದ ಕೊಟ್ಟಿಯಲ್ಲಿ ವೃದ್ದೆ ಶೇಕಮ್ಮ ವಾಸ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಅ.21ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸಿ ಎಚ್.ಬಿ.ಚನ್ನಪ್ಪ ಅವರ ನೇತೃತ್ವದಲ್ಲಿ ಹಾವೇರಿ ನಗರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಶೇಕಮ್ಮನ ಮಗನನ್ನು ಕರೆಸಿ ತಾಯಿಯನ್ನು ತನ್ನೊಂದಿಗೆ ಸಾಕುವಂತೆ ಸೂಚಿಸಿ ಕಳುಹಿಸಿಕೊಟ್ಟಿದ್ದಾರೆ. ಶೇಕಮ್ಮನನ್ನು ಪಾರ್ಕ್‌ಗೆ ಮತ್ತೆ ವಾಪಸ್ ಕಳುಹಿಸದಂತೆ ತಾಕೀತು ಮಾಡಲಾಗಿದೆ. ಗುಡಿಸಲು ನಾಶಪಡಿಸಿ, ಪಾರ್ಕ್ ಅಭಿವೃದ್ಧಿ ಪಡಿಸಲು ಹಾಗೂ ಆಶ್ರಯ ಯೋಜನೆಯಡಿ ಸೂರಿನ ವ್ಯವಸ್ಥೆ ಮಾಡುವ ಕುರಿತು ನಗರಸಭೆಗೆ ಸೂಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಪತ್ರಿಕೆಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net