

ಚಳ್ಳಕೆರೆ: ಸರ್ಕಾರದ ನಿಯಮ ಪಾಲಿಸುವ ಮೂಲಕ ರೈತರು ಸೌಲಭ್ಯ ಪಡೆಯುವ ಅರ್ಹತೆ ಸಂಪಾದಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಳ್ಳಕೆರೆಯಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಬಯಲುಸೀಮೆಯಲ್ಲಿ ಮಳೆ ಕೊರತೆಯಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಲ್ಲಿ ಬೆಳೆ ನಷ್ಟ ಕಾಣುತ್ತೇವೆ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಎದುರಿಸಲು ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕಿದೆ ಎಂದರು.
ಬೆಳೆ ಸಮೀಕ್ಷೆ ವಿಧಾನದಲ್ಲಿ ರೈತರು ನಿರ್ದಿಷ್ಟ ಮಾಹಿತಿ ನೀಡುವ ಮೂಲಕ ಬೆಳೆ ಪರಿಹಾರ, ಬೆಳೆ ವಿಮೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಜೆ.ಅಶೋಕ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಆದ ಶೇಂಗಾ, ತೊಗರಿ, ಮೆಕ್ಕೆಜೋಳ ಸೇರಿ ಇತರ ಬೆಳೆಗಳನ್ನು ಸಮೀಕ್ಷೆ ಮಾಡಲಾಗುವುದು. ಪ್ರತಿ ರೈತರ ಸರ್ವೇ ನಂಬರ್ ಜಮೀನುಗಳಿಗೆ ನಿಗದಿಪಡಿಸಿರುವ ಪಿಆರ್ ಸಿಬ್ಬಂದಿ ಭೇಟಿ ನೀಡಿ, ಬೆಳೆ ಕುರಿತು ವರದಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಎರಡು ತಿಂಗಳು ನಡೆಯುವ ಬೆಳೆ ಸಮೀಕ್ಷೆಯಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ರಾಜ್ಯ, ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಪರಿಹಾರ ಮತ್ತು ಬೆಳೆ ವಿಮೆ ಸೌಲಭ್ಯಕ್ಕೆ ಬೆಳೆ ಸಮೀಕ್ಷೆ ಮಾನದಂಡವಾಗಿರುತ್ತದೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಗುಜ್ಜಾರಪ್ಪ, ಸದಸ್ಯ ಎನ್.ಮಂಜುನಾಥ, ನಗರಸಭಾ ಸದಸ್ಯ ಎಂ.ಜೆ.ರಾಘವೇಂದ್ರ, ತಾಪಂ ಇಒ ಎಚ್.ಶಶಿಧರ, ಪೊಲೀಸ್ ಉಪ ಅಧೀಕ್ಷಕ ಟಿ.ಬಿ.ರಾಜಣ್ಣ ಇದ್ದರು.