ಗ್ಯಾರಂಟಿ ಯೋಜನೆಗೆ 56 ಸಾವಿರ ಕೋಟಿ ರೂ. ಮೀಸಲು

ಗ್ಯಾರಂಟಿ ಯೋಜನೆಗೆ 56 ಸಾವಿರ ಕೋಟಿ ರೂ. ಮೀಸಲು
Published on

 ಕೆ.ಆರ್.ನಗರ: ವಿರೋಧ ಪಕ್ಷದವರು ಅಭಿವೃದ್ಧಿಯ ಹಣ ಗ್ಯಾರಂಟಿಗೆ ಹೋಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗೆ ಪ್ರತ್ಯೇಕವಾಗಿ 56 ಸಾವಿರ ಕೋಟಿ ರೂ. ಹಣವನ್ನು ಮೀಸಲಿಡಲಾಗಿದ್ದು, ಅಭಿವೃದ್ಧಿಗೆ ಅನುದಾನದ ಕೊರತೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕೆ.ಆರ್.ನಗರ ಪಟ್ಟಣದ ಚೀರ್ನಹಳ್ಳಿ ರಸ್ತೆ ಮತ್ತು ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಹೊಸಕೋಟೆ ಗ್ರಾಮದಿಂದ ಕೆ.ಆರ್.ನಗರವರೆಗೆ 17 ಕಿ.ಮೀ ರಸ್ತೆ ಅಭಿವೃದ್ಧಿಯ 34.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ವಿರೋಧ ಪಕ್ಷದ ಶಾಸಕರಿಗೆ ತಲಾ 30 ಕೋಟಿ ರೂ. ಅನುದಾನ ಕೊಡಲಾಗಿದೆ. ಸುಖಾಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನನ್ನ ಜೀವನವೇ ಹೋರಾಟದಿಂದ ಬಂದಿದ್ದು, ಅದೇ ರೀತಿ, ಬುದ್ಧ, ಬಸವ, ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರಕ್ಕೆ 52 ಕೋಟಿ ರೂ. ಅನುದಾನ ನೀಡಲಾಗಿದ್ದು, ಎಲ್ಲ ಶಾಸಕರಿಗೂ ಅನುದಾನ ಕೊಟ್ಟಿದ್ದೇನೆ. ಶಾಸಕ ಡಿ.ರವಿಶಂಕರ್ ಅವರು ನಿಮ್ಮೂರಿಗೆ ಮೊದಲ ಆದ್ಯತೆ ನೀಡಿದ್ದಾರೆ. ಮೈಸೂರು ಜಿಲ್ಲೆಯ ಭಾಗದ ಎಲ್ಲ ಕ್ಷೇತ್ರಗಳಿಗೂ ಅನುದಾನ ಕೊಡಲಾಗಿದೆ, ಮಸೀದಿ, ಸ್ಮಶಾನ ಸೇರಿದಂತೆ ಮನೆಗಳಿಗೆ ಹಣ ಕೊಡಲಾಗುತ್ತಿದೆ. ಸಿದ್ದರಾಮಯ್ಯ ಅವರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ತೆರಿಗೆಯಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿ ಇದೆ ಎಂದರು.

ಪಟ್ಟಣ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮಾಡಲು ಪ್ರಯತ್ನ ಮಾಡಲಾಗವುದು, ಲೋಕೋಪಯೋಗಿ ಇಲಾಖೆ ಶಾಸಕ ಡಿ.ರವಿಶಂಕರ್ ಅವರ ಮನವಿಗೆ ಸದಾ ಸ್ಪಂದಿಸಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಭಾಗದ ರಸ್ತೆ ಅಭಿವೃದ್ಧಿಯಾಗುತ್ತಿರುವುದು ಸಂತಸ ತರಿಸಿದ್ದು, 2028ಕ್ಕೆ ಶಾಸಕ ಡಿ.ರವಿಶಂಕರ್ ಗೆಲುವಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಸಹಕರಿಸಬೇಕು ಎಂದರು.

ಶಾಸಕ ಡಿ.ರವಿಶಂಕರ್ ಮಾತನಾಡಿ, ವಿಧಾನಸಭಾ ಚುನಾವಣೆಗೆ ಮುಂಚೆ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಹಳ್ಳಿಗಳಿಗೆ ಭೇಟಿ ನೀಡಿದಾಗ ಕ್ಷೇತ್ರದ ಹಲವಾರು ಗ್ರಾಮದಲ್ಲಿ ರಸ್ತೆಗಳ ಸಮಸ್ಯೆ ಹೇಳಿಕೊಂಡಿದ್ದರು. ಅದರಂತೆ 20 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಅದೇ ರೀತಿ ಚೀರ‌್ನಹಳ್ಳಿ ಕ್ರಾಸ್‌ನಿಂದ ಬೀರ್ನಹಳ್ಳಿ ಕ್ರಾಸ್‌ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಹಲವಾರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ವಿಧ್ಯುಕ್ತವಾಗಿ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲಾಗಿದೆ. ಅದೇ ರೀತಿ ಲೋಕೋಪಯೋಗಿ ಇಲಾಖೆಯ ವಸತಿ ಗೃಹಗಳನ್ನು ಅಪಾರ್ಟ್‌ಮೆಂಟ್ ಮಾದರಿಯಲ್ಲಿ ಕಟ್ಟಡ ನಿರ್ಮಾಣ, ವಕೀಲರ ಸಂಘಕ್ಕೆ ಭವನ ನಿರ್ಮಾಣಕ್ಕೆ ಭರವಸೆ ಕೊಟ್ಟಿದ್ದಾರೆ. ಕೆ.ಆರ್.ನಗರ ಕ್ಷೇತ್ರಕ್ಕೆ ಮೊದಲ ಬಾರಿಗೆ ರಸ್ತೆಗಳಿಗೆ ಅನುದಾನ ಕೊಟ್ಟಿದ್ದಾರೆ. ಕಪ್ಪಡಿ ಮತ್ತು ಗಂಧನಹಳ್ಳಿ ನದಿ ಸೇತುವೆಯನ್ನು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ಅಂದೇ ಪಟ್ಟಣದ ಪುರಸಭೆ ಬಯಲು ರಂಗಮಂದಿರಲ್ಲಿ ಬೃಹತ್ ವೇದಿಕೆಯಲ್ಲಿ ಕ್ಷೇತ್ರದ ವಿವಿಧ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಹೊಸಕೋಟೆ ವಾಲ್ಮೀಕಿ ಸಮುದಾಯ ಭವನಕ್ಕೆ 10 ಲಕ್ಷ ಅನುದಾನ ಕೊಡಲಾಗಿದೆ, ಗ್ರಾಮದೊಳಗಿನ ರಸ್ತೆಗಳು, ಚರಂಡಿಯನ್ನು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಭರವಸೆ ನೀಡಿದರಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡೇ ಮಾಡುತ್ತೇನೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಕೆ.ಆರ್.ನಗರ ವಾಲ್ಮೀಕಿ ನಾಯಕ ಸಮುದಾಯ ಭವನಕ್ಕೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ವಾಲ್ಮೀಕಿ ನಾಯಕರ ಸಂಘದ ಕೆ.ಆರ್.ನಗರ ತಾಲೂಕು ಅಧ್ಯಕ್ಷ ನರಸಿಂಹ ನಾಯಕ ಮತ್ತು ಸಾಲಿಗ್ರಾಮ ತಾಲೂಕು ಅಧ್ಯಕ್ಷ ಭೇರ್ಯ ಸಿ.ಸಿ.ಮಹದೇವ್ ನೇತೃತ್ವದಲ್ಲಿ ಸಾಲಿಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನಕ್ಕೆ ನಿವೇಶನ ಮತ್ತು ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.

ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಕೆಪಿಸಿಸಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿದರು. ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಎಂ.ರಮೇಶ್, ಗ್ರಾ.ಪಂ.ಅಧ್ಯಕ್ಷ ಜಗದೀಶ್, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಸಿ.ಬಸವರಾಜ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯ ನಟರಾಜ್, ಶಂಕರ್‌ಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ‌್ನಹಳ್ಳಿ ಶಿವಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ಬ್ಲಾಕ್ ಕಾಂಗ್ರೆಸ್ ಎಸ್.ಟಿ. ಘಟಕದ ತಾಲೂಕು ಅಧ್ಯಕ್ಷ ತಿಪ್ಪೂರು ಮಹದೇವ್, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ಮುಖಂಡ ಹೊಸಕೋಟೆ ಚೆಲುವರಾಜ್, ರಾಮನಾಯಕ, ವೆಂಕಟೇಶ್, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಜಗದೀಶ್, ಚೀಫ್ ಇಂಜಿನಿಯರ್ ನಂಜಪ್ಪ, ಎಇಇ ಸುಮಿತಾ, ಜೆಇ ಸಿದ್ದೇಶ್ವರ ಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net