ರೂ. 47.60 ಲಕ್ಷ ಉಳಿತಾಯ ಬಜೆಟ್

30sirsi1
Published on

ಶಿರಸಿ: ಇಲ್ಲಿನ ನಗರಸಭೆಯಲ್ಲಿ ಮಂಗಳವಾರ 2021-22ನೇ ಸಾಲಿನ 47.60 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಅನ್ನು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಂಡಿಸಿದರು.

ಇಲ್ಲಿನ ಅಟಲ್​ಜೀ ಸಭಾಭವನದಲ್ಲಿ ಜರುಗಿದ ಬಜೆಟ್ ಸಭೆಯಲ್ಲಿ ಮಾತನಾಡಿದ ಗಣಪತಿ ನಾಯ್ಕ, ಆದಾಯದ ಮೂಲವಾದ ಆಸ್ತಿ ತೆರಿಗೆ ವಸೂಲಾತಿ 2020-21ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯದವರೆಗೆ 1.78 ಕೋಟಿ ರೂಪಾಯಿ ವಸೂಲಾಗಿದೆ. ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 2.56 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. ನೀರು ಸರಬರಾಜು ಶುಲ್ಕ ಕಳೆದ ಸಾಲಿನಲ್ಲಿ ಡಿಸೆಂಬರ್​ವರೆಗೆ 99.56 ಲಕ್ಷ ರೂ. ವಸೂಲಾಗಿದ್ದು, ಈ ಸಾಲಿನಲ್ಲಿ 2.08 ಕೋಟಿ ರೂ. ಆದಾಯ ಬರಬಹುದೆಂದು ಅಂದಾಜಿಸಲಾಗಿದೆ ಎಂದರು.

ನಗರಸಭೆ ವಾಣಿಜ್ಯ ಮಳಿಗೆಗಳಿಂದ 36.45 ಲಕ್ಷ ರೂ., ಉದ್ದಿಮೆ ಪರವಾನಗಿಯಿಂದ 3.64 ಲಕ್ಷ ರೂ., ಕಸ ವಿಲೇವಾರಿ ಉಪಕರದಿಂದ 66.20 ಲಕ್ಷ ರೂ., ಜಾಹೀರಾತು ಕರದಿಂದ 1.56 ಲಕ್ಷ ರೂ., ಖಾತಾ ಬದಲಾವಣೆಯಿಂದ 2.78 ಲಕ್ಷ ರೂ., ಎಸ್​ಎಫ್​ಸಿ ಮುಕ್ತ ಅನುದಾನದಡಿ 87 ಲಕ್ಷ ರೂ., 15ನೇ ಹಣಕಾಸು ಅನುದಾನದಿಂದ 2.36 ಕೋಟಿ ರೂ. ಮತ್ತು ಕುಡಿಯುವ ನೀರಿಗಾಗಿ 1 ಕೋಟಿ ರೂ., ಎಸ್​ಡಬ್ಲ್ಯುಎಂ. ಘಟಕಕ್ಕಾಗಿ 1.50 ಕೋಟಿ ರೂ., ಎಸ್​ಎಫ್​ಸಿ ವಿಶೇಷ ಅನುದಾನದ ಸಲುವಾಗಿ 1 ಕೋಟಿ ರೂ. ಮೀಸಲಿರಿಸಲಾಗಿದೆ ಎಂದರು.

ಉದ್ದೇಶಿತ ಕೆಲಸ: ರಸ್ತೆ ಚರಂಡಿ ಅಭಿವೃದ್ಧಿಗೆ 5 ಕೋಟಿ ರೂ, ನೀರು ಸರಬರಾಜು ವ್ಯವಸ್ಥೆಗೆ 1.50 ಕೋಟಿ ರೂ., ನಗರಸಭೆ ವ್ಯಾಪ್ತಿಯ ಉದ್ಯಾನಗಳ ಅಭಿವೃದ್ಧಿಗೆ 50 ಲಕ್ಷ ರೂ., ನಗರಸಭೆ ವ್ಯಾಪ್ತಿಯ ವಿವಿಧ ಸ್ಮಶಾನಗಳ ಅಭಿವೃದ್ಧಿಗೆ 25 ಲಕ್ಷ ರೂ., ಬೀದಿ ದೀಪಗಳ ವ್ಯವಸ್ಥೆಗೆ 60 ಲಕ್ಷ ರೂ., ಸ್ವಚ್ಚತೆಗಾಗಿ 1.35 ಕೋಟಿ ರೂ. ಹಾಗೂ ಕರೊನಾ ಸಾಂಕ್ರಾಮಿಕ ರೋಗದ ನಿಯಂತ್ರಕ ಪರಿಕರ ಖರೀದಿಗೆ 15 ಲಕ್ಷ ರೂ., ಎಸ್​ಎಫ್​ಸಿ ಅನುದಾನದಿಂದ 19.25 ಲಕ್ಷ ರೂ. ಹಾಗೂ ನಗರಸಭೆ ನಿಧಿಯಿಂದ 13.20 ಲಕ್ಷ ರೂ., ಪರಿಶಿಷ್ಟ ಜಾತಿಯ ವರ್ಗದವರ ಅಭಿವೃದ್ಧಿಗೆ, ಬಡವರ ಕಲ್ಯಾಣಕ್ಕೆ ಎಸ್​ಎಫ್​ಸಿಯಿಂದ 4.81 ಲಕ್ಷ ರೂ. ಹಾಗೂ ನಗರಸಭೆ ನಿಧಿಯಿಂದ 3.97 ಲಕ್ಷ ರೂ., ವಿಕಲಚೇತನರ ಕಲ್ಯಾಣಕ್ಕೆ ಎಸ್​ಎಫ್​ಸಿ ನಿಧಿಯಡಿ 3.32 ಲಕ್ಷ ರೂ. ಹಾಗೂ ನಗರಸಭೆ ಅನುದಾನದಲ್ಲಿ 2.74 ಲಕ್ಷ ರೂ., ಕ್ರೀಡೆಗಾಗಿ 2.50 ಲಕ್ಷ ರೂ.,, ಪ್ರಕೃತಿ ವಿಕೋಪದಡಿ 5 ಲಕ್ಷ ರೂ. ಹಾಗೂ ಇತರ ಸಹಾಯಧನಕ್ಕೆ 3 ಲಕ್ಷ ರೂ. ಮೀಸಲು ಇಡಲಾಗಿದೆ ಎಂದು ಗಣಪತಿ ನಾಯ್ಕ ತಿಳಿಸಿದರು.

ಅಂಗಡಿ ಮಳಿಗೆಗಳನ್ನು ನಿರ್ವಿುಸಿ, ಆದಾಯ ಹೆಚ್ಚಿಸುವ ಕಾರ್ಯ ಮಾಡುವ ಜತೆಗೆ 2022ರ ಶಿರಸಿ ಮಾರಿಕಾಂಬಾ ಜಾತ್ರೆ ಸಲುವಾಗಿ 50 ಲಕ್ಷ ರೂ. ಮೀಸಲು ಇಟ್ಟಿದ್ದು, ನಗರಸಭೆ ಕಚೇರಿ ನಿರ್ವಣಕ್ಕಾಗಿ 10 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ ಎಂದರು. ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪೌರಾಯುಕ್ತ ರಮೇಶ ನಾಯಕ ಇದ್ದರು.

ಕರೊನಾ ಕಾರಣದಿಂದ ಆದಾಯ ಇಳಿಕೆಯಾಗಿದೆ. ಡಿಸೆಂಬರ್ ಅಂತ್ಯದವರೆಗಿನ ಲೆಕ್ಕ ನೀಡಲಾಗಿದೆ. ಮಾರ್ಚ್ ಕೊನೆಯವರೆಗೆ ಬಹುತೇಕ ಗುರಿ ಸಾಧಿಸಲಾಗಿದೆ. ಈ ಬಾರಿ ಹೆಚ್ಚಿನ ಆದಾಯ ವಸೂಲಿಗೆ ಪ್ರಯತ್ನಿಸಲಾಗುತ್ತದೆ. | ರಮೇಶ ನಾಯಕ, ಪೌರಾಯುಕ್ತ

2020-21ನೇ ಸಾಲಿನಲ್ಲಿ ನಗರಾಡಳಿತದ ಸಾಧನೆ ಅತ್ಯಂತ ಕಳಪೆಯಾಗಿದೆ. ಪ್ರಸಕ್ತ ಬಜೆಟ್​ನಲ್ಲಿ ಪ್ರಾಕೃತಿಕ ವಿಕೋಪ ನಿಧಿಗೆ ಕೇವಲ 5 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಇದನ್ನು ಹೆಚ್ಚಿಸಬೇಕಾದ ಅಗತ್ಯವಿದೆ. | ಶ್ರೀಕಾಂತ ತಾರಿಬಾಗಿಲು, ನಗರಸಭೆ ಸದಸ್ಯ

ವಸತಿ, ಶೌಚಗೃಹದ ಅನುದಾನ ನೀಡಿ: ವಿವಿಧ ವಸತಿ ಯೋಜನೆಗಳಡಿ ನೀಡಿದ ಮನೆಗಳಿಗೆ 3ನೇ ಹಂತದ ಅನುದಾನ ಬಿಡುಗಡೆಯಾಗಿ 2 ವರ್ಷವಾಗಿದೆ. ಒಟ್ಟು 52 ಫಲಾನುಭವಿಗಳಿಗೆ 12 ಲಕ್ಷ ರೂ. ಮಾತ್ರ ಬಂದಿದೆ. ಬಾಕಿ ಅನುದಾನ ಬೇಗ ಬಿಡುಗಡೆ ಮಾಡಬೇಕು. ನಗರಸಭೆಯಿಂದ ಫಲಾನುಭವಿಗಳಿಗೆ ಮಂಜೂರಾಗಿರುವ ಶೌಚಗೃಹದ ಜಿಪಿಎಸ್ ಕಾರ್ಯ ವರ್ಷದಿಂದ ಬಾಕಿಯಿದೆ. ವಾರದೊಳಗೆ ಜಿಪಿಎಸ್ ಮುಗಿಸಿ ಅನುದಾನ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಭೆಯಲ್ಲಿ ಸದಸ್ಯ ಪ್ರದೀಪ ಶೆಟ್ಟಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net