ಗ್ಯಾರಂಟಿಗಳಿಗಾಗಿ ಜಿಲ್ಲೆಗೆ 3105.78 ಕೋಟಿ ರೂ.

ಗ್ಯಾರಂಟಿಗಳಿಗಾಗಿ ಜಿಲ್ಲೆಗೆ 3105.78 ಕೋಟಿ ರೂ.
Published on

ಹಾಸನ: ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಹಾಸನ ಜಿಲ್ಲೆಗೆ 3105.78 ಕೋಟಿ ರೂ. ಬಿಡುಗಡೆ ಆಗಿದ್ದು, ಶೇ.99.5ರಷ್ಟು ಅನುಷ್ಠಾನಗೊಂಡಿರುವುದು ಶ್ಲಾಘನೀಯ ಎಂದು ಶಾಸಕ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಾಸನ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬುವುದರ ಜತೆಗೆ ರಾಜ್ಯದ ಆರ್ಥಿಕ ಪುನಶ್ಚೇತನಕ್ಕೂ ಸಹಕಾರಿಯಾಗಿದೆ ಎಂದರು.

ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್‌ಟಿ ನೀತಿ, ಕರೊನಾ ಸಮಯದಲ್ಲಿನ ಲಾಕ್‌ಡೌನ್‌ನಿಂದ ಜನರು ಆರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದರು. ಜನರಲ್ಲಿ ಕೊಳ್ಳುವ ಶಕ್ತಿ ಕುಸಿದ ಪರಿಣಾಮ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿತು. ಗ್ರಾಮೀಣ ಭಾಗದ ಜನತೆ ಹಾಗೂ ಮಧ್ಯಮ ವರ್ಗದವರಲ್ಲಿ ಖರೀದಿ ಸಾಮರ್ಥ್ಯ ವೃದ್ಧಿಯಾದರೆ ರಾಜ್ಯ, ದೇಶದ ಆರ್ಥಿಕತೆ ಸರಿದೂಗಲಿದೆ ಎಂಬುದನ್ನರಿತ ಕಾಂಗ್ರೆಸ್, ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಜತೆಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿರುವ ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ ಪಂಚಗ್ಯಾರಂಟಿಗಳು. ಯೋಜನೆ ವಿರೋಧಿಸುವವರು ಬೆರಳೆಣಿಕೆಯಷ್ಟು, ಆದರೆ ಸ್ವಾಗತಿಸಿ ಆಶೀರ್ವದಿಸುತ್ತಿರುವವರು ಲಕ್ಷಾಂತರ ಮಂದಿ ಎಂದರು.

ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ತಾಲೂಕು ಅಧ್ಯಕ್ಷ ಎಚ್.ಪಿ.ಶ್ರೀಧರ್ ಗೌಡ, ಧರ್ಮಶೇಖರ, ಆನಂದಮೂರ್ತಿ ಜೆ.ಬಿ., ಶಿವಕುಮಾರ್, ಸದಸ್ಯರಾದ ಕಮಲಮ್ಮ ಹಾಗೂ ಜಿಪಂ ಮುಖ್ಯ ಯೋಜನಾಧಿಕಾರಿ ಕೃಷ್ಣಮೂರ್ತಿ, ವಾರ್ತಾಧಿಕಾರಿ ಮೀನಾಕ್ಷಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಉಪಸ್ಥಿತರಿದ್ದರು.

ದೇವರ ದರ್ಶನ: ಶಕ್ತಿ ಯೋಜನೆಯಿಂದ ಗ್ರಾಮೀಣ ಜನತೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಲು ಸಹಕಾರಿಯಾಗಿದೆ. ಕಳೆದ ಬಾರಿ ಹಾಸನಾಂಬ ದರ್ಶನಕ್ಕೆ ಬೀದರ್‌ನಿಂದ ಚಾಮರಾಜನಗರದವರೆಗೆ ಮಹಿಳೆಯರು ಶಕ್ತಿ ಯೋಜನೆ ಮೂಲಕ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. 20 ಲಕ್ಷ ಭಕ್ತರು ಹಾಸನಾಂಬ ದರ್ಶನ ಪಡೆದಿದ್ದು ಇದರಲ್ಲಿ ಮಹಿಳೆಯರದ್ದು ಸಿಂಹಪಾಲು. ದೇವರ ಹುಂಡಿಯಲ್ಲಿ 14 ಕೋಟಿ ರೂ. ಸಂಗ್ರಹವಾಗಿದ್ದು ದಾಖಲೆ ಎಂದು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಹೇಳಿದರು.

ಗೃಹಲಕ್ಷ್ಮಿ ಹಣವನ್ನು ಸಾಲದ ಕಂತುಗಳಿಗೆ ಬ್ಯಾಂಕುಗಳು ಕಡಿತ ಮಾಡಿಕೊಳ್ಳುತ್ತಿಲ್ಲ. ಒಂದು ವೇಳೆ ಕಡಿತ ಆದರೂ ಎರಡು ಮೂರು ದಿನದಲ್ಲಿ ಆ ಹಣ ಖಾತೆಗೆ ವಾಪಸ್ ಆಗುತ್ತಿದೆ. ಈ ಬಗ್ಗೆ ಫಲಾನುಭವಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸಭೆಗೆ ಮಾಹಿತಿ ನೀಡಿದರು.

ಯುವನಿಧಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಪಂ ಸಿಇಒ ಪೂರ್ಣಿಮಾ ಬಿ.ಆರ್. ಹೇಳಿದರು. ಜಿಲ್ಲೆಯ 264 ಪಂಚಾಯಿತಿ ಕಚೇರಿಗಳಲ್ಲಿ ದೊಡ್ಡ ದೊಡ್ಡ ಬ್ಯಾನರ್ ಅಳವಡಿಸಿ ಪ್ರಚಾರ ನಡೆಸುವುದರ ಜತೆಗೆ ಕಾಲೇಜುಗಳಲ್ಲಿ ಪ್ರಚಾರ ಕಾರ್ಯಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಂಚ ಗ್ಯಾರಂಟಿಗಳ ಪ್ರಗತಿ: ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 4,27,269 ಫಲಾನುಭವಿಗಳಿದ್ದಾರೆ. 2023ರಿಂದ ಜೂನ್‌ವರೆಗೆ 1783 ಕೋಟಿ ರೂ. ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದು ಶೇ.99.5 ರಷ್ಟು ಮಂದಿಗೆ ಯೋಜನೆ ತಲುಪಿದೆ. ಜಿಲ್ಲೆಯಲ್ಲಿ 4201 ಮಂದಿ ಫಲಾನುಭವಿಗಳು ಮರಣ ಹೊಂದಿದ್ದಾರೆ. ಹೀಗಾಗಿ ಮರಣ ಹೊಂದಿರುವವರ ಪಟ್ಟಿ ಕ್ರೋಡೀಕರಿಸಿ ರಾಜ್ಯ ಮತ್ತು ಜಿಲ್ಲಾ ಸಮಿತಿಗೆ ಪ್ರತಿ ತಿಂಗಳು ನೀಡಬೇಕು ಎಂದು ಅಧಿಕಾರಿಗಳಿಗೆ ದಿನೇಶ್ ಗೂಳಿಗೌಡ ಸೂಚಿಸಿದರು.

ಗೃಹಜ್ಯೋತಿ ಯೋಜನೆಯಡಿ 5,35,989 ಗ್ರಾಹಕರು ನೋಂದಣಿಯಾಗಿದ್ದು 19,78,6793 ಯೂನಿಟ್ ಉಚಿತ ವಿದ್ಯುತ್ ಬಳಕೆ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರ 415 ಕೋಟಿ ರೂ. ಸಬ್ಸಿಡಿ ಪಾವತಿ ಮಾಡಿದ್ದು, ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಸರಾಸರಿ 2 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು 485 ಕೋಟಿ ರೂ.ಗಳನ್ನು ನಿಗಮಕ್ಕೆ ಸರ್ಕಾರ ಪಾವತಿ ಮಾಡಿದೆ.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 4,29,023 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ 407.05 ಕೋಟಿ ರೂ. ವರ್ಗಾಯಿಸಲಾಗಿದೆ. ಫೆಬ್ರವರಿಯಿಂದ 170 ರೂ. ಬದಲಿಗೆ ಐದು ಕೆಜಿ ವಿತರಣೆ ಮಾಡಲಾಗುತ್ತಿದೆ. ಶೇ.84ರಷ್ಟು ಬಿಪಿಎಲ್ ಕಾರ್ಡ್‌ದಾರರಿದ್ದು ಎಲ್ಲರಿಗೂ ಸಮರ್ಪಕವಾಗಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ 6367 ಫಲಾನುಭವಿಗಳಿಗೆ 15.78 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ. ಕಾಲೇಜುಗಳಲ್ಲಿ ಯೋಜನೆ ಕುರಿತು ಪ್ರಚಾರ ಮಾಡಿ ನೋಂದಣಿ ಅಭಿಯಾನ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net