ಮಾದಪ್ಪ ಹುಂಡಿಯಲ್ಲಿ 3.26 ಕೋಟಿ ರೂ. ಸಂಗ್ರಹ

16 HANUR 6
Published on

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ರಾತ್ರಿಯವರೆಗೂ ನಡೆದ ಹುಂಡಿ ಎಣಿಕೆಯಲ್ಲಿ ಈ ಬಾರಿ 35 ದಿನಗಳ ಅವಧಿಯಲ್ಲಿ ದಾಖಲೆಯ 3.26 ಕೋಟಿ ರೂ. ಸಂಗ್ರಹವಾಗಿದೆ.

ಬೆಳಗ್ಗೆ 7 ಗಂಟೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ದೇಗುಲದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಚೀಲದಲ್ಲಿರಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ವಿಶಾಲ ಕೊಠಡಿಗೆ ರವಾನಿಸಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಸೂಕ್ತ ಬಂದೋಬಸ್ತ್‌ನೊಂದಿಗೆ ಎಣಿಕೆ ಕಾರ್ಯ ಆರಂಭಿಸಲಾಯಿತು. ಎಣಿಕೆ ಕಾರ್ಯವು ರಾತ್ರಿ 10 ಗಂಟೆವರೆಗೂ ನಡೆಯಿತು.

ಈ ಬಾರಿ 4 ದಿನಗಳ ಕಾಲ ಜರುಗಿದ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಿದ್ದರು. ಜತೆಗೆ ವಾರ‌್ಯಾಂತದ ಸಾಲು ಸಾಲು ರಜೆ ದಿನಗಳಂದು ಶ್ರೀಕ್ಷೇತ್ರಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಹರಕೆ ಹೊತ್ತ ಭಕ್ತರು ದೇಗುಲ ಸೇರಿದಂತೆ ವಿವಿಧೆಡೆಯಲ್ಲಿ ಇರಿಸಿದ್ದ ಹುಂಡಿಗಳಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹಾಕಿದ್ದರು. ಜತೆಗೆ ಇ ಹುಂಡಿಯ ಮೂಲಕವೂ ಹಣ ಸಂದಾಯ ಮಾಡಿದ್ದರು. ಹುಂಡಿ ಎಣಿಕೆಯಲ್ಲಿ ಇ-ಹುಂಡಿ ಹಣ 5,90,002 ರೂ. ಸೇರಿದಂತೆ 3,26.95,339 ರೂ. ನಗದು, ಚಿನ್ನ 47 ಗ್ರಾಂ ಹಾಗೂ 2 ಕೆಜಿ 200 ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿದೆ.

ಮಾ.12 ರಂದು ನಡೆದ ಹುಂಡಿ ಎಣಕೆಯಲ್ಲಿ 20 ದಿನದ ಅವಧಿಗೆ 2,85,69,937 ರೂ., ಫೆ. 20ರಂದು ನಡೆದ ಎಣಿಕೆಯಲ್ಲಿ 1,94,49,243 ರೂ. ಹಾಗೂ ಜ.23 ರಂದು ನಡೆದ ಎಣಿಕೆಯಲ್ಲಿ 2,29,67,216 ರೂ. ಸಂಗ್ರಹವಾಗಿತ್ತು. ಆದರೆ ಈ ಬಾರಿಯ ಹುಂಡಿ ಎಣಿಕೆಯಲ್ಲಿ ಹೆಚ್ಚಿನ ಮೊತ್ತದ ಹಣ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ.

ಹುಂಡಿ ಎಣಿಕೆಯಲ್ಲಿ ಚಲಾವಣೆಯಲ್ಲಿ ಇಲ್ಲದ 2 ಸಾವಿರ ರೂ. ಮುಖಬೆಲೆಯ ಒಂದು ನೋಟು ಹಾಗೂ 31 ವಿದೇಶಿ ನೋಟುಗಳು ದೊರೆತಿವೆ.

ಎಣಿಕೆ ಸಂದರ್ಭದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಮಾಹಿತಿ ಪಡೆದರು. ಎಣಿಕೆಯಲ್ಲಿ ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಉಪ ಕಾರ್ಯದರ್ಶಿ ಜಿ.ಎಲ್.ಚಂದ್ರಶೇಖರ್, ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net