

ಬೆಂಗಳೂರು: ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಪ್ರಾಡಕ್ಟ್ ಬದಲಾಗಿ ಬೇರೆ ಪ್ರಾಡಕ್ಟ್ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆನ್ಲೈನ್ಲ್ಲಿ ದುಬಾರಿ ಬೆಲೆಯ ಫೋನ್ ( Smartphone ) ಬುಕ್ ಮಾಡಿದ ಗ್ರಾಹಕನಿಗೆ ಆರ್ಡರ್ ಡೆಲಿವರಿ ಬಳಿಕ ದೊಡ್ಡ ಆಘಾತವೇ ಕಾದಿತ್ತು.
ಈ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ದೀಪಾವಳಿಯ ಸಂದರ್ಭದಲ್ಲಿ ತಮಗಾದ ಕಹಿ ಅನುಭವವನ್ನು ಟೆಕ್ಕಿಯೊಬ್ಬರು ವಿವರಿಸಿದ್ದಾರೆ. ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ ನಂತರ, ಅವರ ಮನೆಗೆ ಬಂದ ಪಾರ್ಸೆಲ್ ಒಳಗೆ ಫೋನ್ ಬದಲು ಟೈಲ್ಸ್ ಪೀಸ್ ಸಿಕ್ಕಿರುವುದಾಗಿ ಹೇಳಿದ್ದಾರೆ.
ಪ್ರಕರಣದ ವಿವರಕ್ಕೆ ಬರುವುದಾದರೆ, ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪ್ರೇಮಾನಂದ್, ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ಮೂಲಕ ತಮ್ಮಿಷ್ಟದ 1.87 ಲಕ್ಷ ರೂ. ಮೌಲ್ಯದ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಅನ್ನು ಆರ್ಡರ್ ಮಾಡಿದರು. ದೀಪಾವಳಿಯೊಳಗೆ ಫೋನ್ ತನ್ನ ಕೈಯಲ್ಲಿರುವಂತೆ ಅಕ್ಟೋಬರ್ 14 ರಂದೇ ಅಮೆಜಾನ್ ಅಪ್ಲಿಕೇಶನ್‌ನಲ್ಲಿ ಸ್ಮಾರ್ಟ್‌ಫೋನ್‌ಗಾಗಿ ಆರ್ಡರ್ ಮಾಡಿದರು. ಅಲ್ಲದೆ, ಕ್ರೆಡಿಟ್ ಕಾರ್ಡ್ ಮೂಲಕ ಪೂರ್ಣ ಮೊತ್ತವನ್ನು ಸಹ ಪಾವತಿಸಿದರು.
ಫೋನ್ ಯಾವಾಗ ತಮ್ಮ ಬಳಿಗೆ ಬರುತ್ತದೆ ಎಂದು ಕಾತರದಿಂದ ಕಾಯುತ್ತಿದ್ದರು. ಅಂದುಕೊಂಡ ಸಮಯಕ್ಕೆ ಅ.19ರಂದು ಡೆಲಿವರಿ ಬಾಯ್ ಪಾರ್ಸೆಲ್ ತಂದು ಟೆಕ್ಕಿ ಕೈಗೆ ನೀಡಿದರು. ಖುಷಿಯಿಂದ ಬಾಕ್ಸ್ ಓಪನ್ ಮಾಡಿದ ಟೆಕ್ಕಿಗೆ ದೊಡ್ಡ ಆಘಾತವೊಂದು ಎದುರಾಗಿತ್ತು. ಅದೇನೆಂದರೆ, ಬಾಕ್ಸ್ ಒಳಗೆ ಫೋನ್ ಇರಲಿಲ್ಲ. ಸೀಲ್ ಮಾಡಿದ ಪ್ಯಾಕೇಜ್ ಅನ್ನು ಅನ್‌ಬಾಕ್ಸ್ ಮಾಡುವ ವಿಡಿಯೋವನ್ನೂ ಟೆಕ್ಕಿ ರೆಕಾರ್ಡ್ ಮಾಡಿದ್ದರು.
ಕೂಡಲೇ ಟೆಕ್ಕಿ ಪ್ರೇಮಾನಂದ್ ಅವರು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಗೆ ದೂರು ಸಲ್ಲಿಸಿದರು. ಅಲ್ಲದೆ, ಔಪಚಾರಿಕವಾಗಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಸದ್ಯ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರೇಮಾನಂದ್, ನಾನು 1.87 ಲಕ್ಷ ರೂ. ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 7 ಅನ್ನು ಆರ್ಡರ್ ಮಾಡಿದ್ದೆ. ಆದರೆ, ಬಾಕ್ಸ್ ಓಪನ್ ಮಾಡಿದ ನನಗೆ ಶಾಕ್ ಕಾದಿತ್ತು. ಏಕೆಂದರೆ, ಪಾರ್ಸೆಲ್ ಒಳಗೆ ಫೋನ್ ಬದಲಿಗೆ ಮಾರ್ಬಲ್ ಕಲ್ಲು ಸಿಕ್ಕಿತು. ಈ ಘಟನೆ ನನ್ನ ಹಬ್ಬದ ಉತ್ಸಾಹವನ್ನೇ ಹಾಳುಮಾಡಿತು. ಆನ್‌ಲೈನ್‌ನಲ್ಲಿ, ವಿಶೇಷವಾಗಿ ಅಮೆಜಾನ್‌ನಲ್ಲಿ ಶಾಪಿಂಗ್ ಮಾಡುವಾಗ ಎಲ್ಲರೂ ಬಹಳ ಜಾಗರೂಕರಾಗಿರಬೇಕು ಎಂದು ಒತ್ತಾಯಿಸುತ್ತೇನೆ ಎಂದು ಪ್ರೇಮಾನಂದ್ ಹೇಳಿದ್ದಾರೆ. (ಏಜೆನ್ಸೀಸ್)