

ಬೆಂಗಳೂರು:ರಾಜ್ಯದಲ್ಲಿ ಪ್ರತಿ ಬಾಟಲ್ ಬಿಯರ್ ಮೇಲೆ ಸರಾಸರಿ 10 ರೂ.ಹೆಚ್ಚಳವಾಗುವ ಸಾಧ್ಯತೆ ಇದೆ. ಅಬಕಾರಿ ಇಲಾಖೆ ಸಲ್ಲಿಸಿರುವ ದರ ಹೆಚ್ಚಳ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ಕೊಟ್ಟರೆ ಅ.1ರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ.
ರಾಜ್ಯದಲ್ಲಿ 3,988 ವೈನ್ಶಾಪ್(ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್ಐಎಲ್ (ಸಿಎಲ್11ಸಿ) ಮತ್ತು 745 ಆರ್ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 65-70 ಕೋಟಿ ರೂ.ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ. ಆದಾಯ ಹೆಚ್ಚಿಸುವ ಸಲುವಾಗಿ ಪ್ರೀಮಿಯಂ ಮದ್ಯದ ದರ ಇಳಿಸಿ, ಬಿಯರ್ ದರ ಹೆಚ್ಚಿಸಿ ಸರ್ಕಾರ ಆ.26ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ಬಿಯರ್ ದರ ಹೆಚ್ಚಳ ಸಂಬಂಧ ಅಂತಿಮ ಅಧಿಸೂಚನೆ ಇನ್ನೂ ಹೊರಬಂದಿಲ್ಲ. ವಾರದೊಳಗೆ ಅಧಿಸೂಚನೆ ಹೊರಬರಲಿದ್ದು, ಅದರನ್ವಯ ಬಿಯರ್ ದರ ಹೆಚ್ಚಳವಾಗಲಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸತತ 3 ಬಾರಿ ಬೆಲೆ ಹೆಚ್ಚಳ: ಐದು ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸತತ 4ನೇ ಬಾರಿ ಬಿಯರ್ ದರ ಹೆಚ್ಚಿಸಿದೆ. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ, ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಶುಂಕ ಹೆಚ್ಚಿಸಿದ್ದರು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಹೆಚ್ಚವರಿ ಅಬಕಾರಿ ಸುಂಕವನ್ನು ಶೇ.10 ಹೆಚ್ಚಿಸಲಾಗಿತ್ತು. ಇದೀಗ ಬಿಯರ್ ಬಾಟಲ್ ಮೇಲೆ ಸರಾಸರಿ 10 ರೂ.ಹೆಚ್ಚಳವಾಗಲಿದೆ.