ರೂ. 10 ಕೋಟಿ ಬೆಲೆಯ ನಕಲಿ ಬೀಜ ವಶಕ್ಕೆ

27-hvr-01
Published on

ಹಾವೇರಿ: ಕಳೆದ ಐದಾರು ವರ್ಷಗಳ ಹಿಂದೆ ಬೀಜೋತ್ಪಾದನೆಯಲ್ಲಿ ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧಿ ಪಡೆದಿದ್ದ ಜಿಲ್ಲೆಗೀಗ ನಕಲಿ ಬಿತ್ತನೆ ಬೀಜ ಮಾರಾಟದ ಕಳಂಕ ಅಂಟಿದೆ. ಜಿಲ್ಲೆಯ ವಿವಿಧೆಡೆ ರೈತರಿಗೆ ಮುಂಗಾರು ಬಿತ್ತನೆಗೆ ಪೂರೈಸಲು ಸಿದ್ಧತೆ ನಡೆಸಿದ್ದ ನಕಲಿ ಬೀಜ ಸಂಗ್ರಹದ ಕೋಲ್ಡ್ ಸ್ಟೋರೇಜ್​ಗಳ ಮೇಲೆ ಕಳೆದೊಂದು ವಾರದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಗೋದಾಮುಗಳ ಮೇಲೆ ದಾಳಿ ನಡೆಸಿ 10 ಕೋಟಿ ರೂ. ಮೌಲ್ಯದ 9,578 ಸಾವಿರ ಕ್ವಿಂಟಾಲ್​ನಷ್ಟು ನಕಲಿ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ. 50ಕ್ಕೂ ಅಧಿಕ ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕೃಷಿ ಇಲಾಖೆಯು ಪ್ರತಿವರ್ಷದ ಮುಂಗಾರು ಹಂಗಾಮಿನಲ್ಲಿ ನಕಲಿ ಹಾಗೂ ಖುಲ್ಲಾ ಬಿತ್ತನೆ ಬೀಜ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ನಕಲಿ ಬಿತ್ತನೆ ಬೀಜಗಳನ್ನು ವಶಪಡಿಸಿಕೊಳ್ಳುವುದು ಅಲ್ಲಲ್ಲಿ ಕಂಡುಬರುತ್ತಿತ್ತು. ಜಿಲ್ಲೆಯಲ್ಲಿ ರಾಣೆಬೆನ್ನೂರ ತಾಲೂಕಿನಲ್ಲಿಯೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಲವೊಂದಿಷ್ಟು ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ವರ್ಷದ ಮುಂಗಾರು ಹಂಗಾಮು ಆರಂಭಕ್ಕೆ ಮುನ್ನ ಜಿಲ್ಲೆಯಲ್ಲಿಯೇ 9,578 ಕ್ವಿಂಟಾಲ್ ನಕಲಿ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿರುವುದು ರಾಜ್ಯ ಕೃಷಿ ಇಲಾಖೆಯ ಇತಿಹಾಸದಲ್ಲಿಯೇ ದಾಖಲೆಯಾಗಿದೆ.

ಜಿಲ್ಲೆಯ ಹಿರೇಕೆರೂರ, ರಾಣೆಬೆನ್ನೂರ, ಹಾನಗಲ್ಲ, ಬ್ಯಾಡಗಿ, ಹಾವೇರಿ ತಾಲೂಕಿನ ಕೆಲ ಭಾಗವು ಬೀಜೋತ್ಪಾದನೆಗೆ ಹೇಳಿ ಮಾಡಿಸಿದಂತಿತ್ತು. ಇಲ್ಲಿ ಬೀಜೋತ್ಪಾದನೆಗಾಗಿ ವಿದೇಶಿ ಕಂಪನಿಗಳು ಬಂದು ನೆಲೆಯೂರಿದ್ದವು. ಇಲ್ಲಿ ಬೆಳೆಯುತ್ತಿದ್ದ ಬೀಜಗಳಿಗೆ ವಿದೇಶಗಳಲ್ಲಿಯೂ ಬೇಡಿಕೆಯಿತ್ತು. ಹೀಗಾಗಿ ಹಾವೇರಿ ಜಿಲ್ಲೆ ಬೀಜೋತ್ಪಾದನೆಯಲ್ಲಿ ಏಷ್ಯಾ ಖಂಡದಲ್ಲಿ ಹೆಸರು ಗಳಿಸಿತ್ತು. ಇದೀಗ ಈ ಜಿಲ್ಲೆಯಲ್ಲಿಯೇ 9,578ಕ್ವಿಂಟಾಲ್ ನಕಲಿ ಬಿತ್ತನೆ ಬೀಜಗಳು ದೊರೆತಿರುವುದು ಜಿಲ್ಲೆಯ ಹೆಸರಿಗೆ ಕಳಂಕ ತಂದಿದೆ.

ಸದ್ಯ ಕೃಷಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಬೀಜಗಳು ಇನ್ನು ಕೆಲವೇ ದಿನಗಳಲ್ಲಿ ವಿವಿಧ ಬೀಜ ಕಂಪನಿಗಳ ನಕಲಿ ಪ್ಯಾಕೇಟ್​ಗಳ ಹಳ್ಳಿಹಳ್ಳಿಗೂ ತಲುಪಿ ರೈತರ ಕೈಸೇರುತ್ತಿದ್ದವು. ಇವುಗಳನ್ನು ಬಿತ್ತಿದ್ದರೇ ರೈತರು ಸರಿಯಾದ ಇಳುವರಿ ಬಾರದೇ, ಇಲ್ಲವೇ ಸಸಿಯ ಪ್ರಮಾಣ ಕಡಿಮೆಯಾಗಿ ರೈತರು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತವಾಗಿತ್ತು. ಅದೃಷ್ಠವಶಾತ್ ಕೃಷಿ ಸಚಿವರ ರೈತರ ಪರ ಕಾಳಜಿಯಿಂದ ಕಳಪೆ ಬಿತ್ತನೆ ಬೀಜದ ಮಾಫಿಯಾದ ಮೂಲಕ್ಕೇ ಕೊಡಲಿಯೇಟು ಬಿದ್ದಿದೆ. ಆದರೇ ಈ ಮಾಫಿಯಾ ಬಗೆದಷ್ಟೂ ಆಳವಾಗುತ್ತಲೇ ಹೋಗುತ್ತಿದ್ದು, ಇನ್ನು ಎಷ್ಟು ಪ್ರಮಾಣದಲ್ಲಿ ಬೀಡು ಬಿಟ್ಟಿದೆ ಎಂಬುದರ ಪರಿಶೀಲನೆ ತ್ವರಿತವಾಗಿ ನಡೆಯಬೇಕಿದೆ.

ಮಾಫಿಯಾ ಕೇಂದ್ರವಾಗಿಯೇ ಕೋಲ್ಡ್ ಸ್ಟೋರೇಜ್: ಬ್ಯಾಡಗಿಯಲ್ಲಿರುವ ಕೋಲ್ಡ್ ಸ್ಟೋರೇಜ್​ಗಳೇ ಈ ನಕಲಿ ಬೀಜ ಸಂಗ್ರಹಣಾ ಕೇಂದ್ರವಾಗಿವೆ ಎನ್ನುವುದು ಆತಂಕಕಾರಿಯಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಕಳಪೆ ಬೀಜ ಎಲ್ಲಿಂದ ಬಂದಿವೆ ಎಂಬ ಮೂಲವನ್ನು ಹುಡುಕಲು ಅಧಿಕಾರಿಗಳು ಶುರುಮಾಡಿದ್ದಾರೆ. ಈವರೆಗೂ ಗೋದಾಮು ಮಾಲೀಕರು ಹಾಗೂ ಅದನ್ನು ಬಾಡಿಗೆ ಪಡೆದು ಬೀಜ ಸಂಗ್ರಹಿಸಿದವರು ಸಿಕ್ಕಿಬಿದ್ದಿದ್ದು, ಈ ಬೀಜಗಳು ಎಲ್ಲಿಂದ ಬಂದವು ಎಂಬುದ ತನಿಖೆಯೂ ತ್ವರಿತವಾಗಿ ನಡೆಯಬೇಕಿದೆ.

ಎಲ್ಲೆಲ್ಲಿ ಎಷ್ಟು ಬೀಜ ವಶಕ್ಕೆ: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ದಾಳಿ ನಡೆಸಿದ ಕೃಷಿ ಅಧಿಕಾರಿಗಳ ತಂಡ ಹಿರೇಕೆರೂರ ತಾಲೂಕು ಶಿರಗಂಬಿಯ ಸುರೇಶಗೌಡ ಸೊರಟೂರ ಎಂಬುವವರ ಗೋದಾಮಿನಲ್ಲಿ 35ಕ್ವಿ, ಬ್ಯಾಡಗಿಯ ಸೂರ್ಯ ಕೋಲ್ಡ್ ಸ್ಟೋರೇಜ್​ನಲ್ಲಿ 3,259ಕ್ವಿ, ಛತ್ರ ಗ್ರಾಮದ ವಕ್ರತುಂಡ ಕೋಲ್ಡ್ ಸ್ಟೋರೇಜ್​ನಲ್ಲಿ 2,624ಕ್ವಿ, ತೆರೆದಹಳ್ಳಿ ನವಲಿ ಪುಂಡಲೀಕ ಕೋಲ್ಡ್ ಸ್ಟೋರೇಜ್​ನಲ್ಲಿ 1,484ಕ್ವಿಂ, ಬ್ಯಾಡಗಿ ಗುರುಸಿದ್ಧಗಂಗಾ ಕೋಲ್ಡ್ ಸ್ಟೋರೇಜ್​ನಲ್ಲಿ 22.5ಕ್ವಿ, ಹಾವೇರಿ ಕಾಂಚನಗಂಗಾ ಬೀಜ ಸಂಸ್ಕರಣಾ ಘಟಕದಲ್ಲಿ 280ಕ್ವಿ ನಕಲಿ ಬೀಜ ವಶಕ್ಕೆ ಪಡೆದಿದ್ದಾರೆ. ಬ್ಯಾಡಗಿ ಬೋಗಾಲ್ತಿ ಕೋಲ್ಡ್ ಸ್ಟೋರೇಜ್​ನಲ್ಲಿ ಬೀಜೋಪಚಾರ ಮಾಡದಿರುವ ಖುಲ್ಲಾ 1,586ಕ್ವಿಂಟಾಲ್ ಮೆಕ್ಕೆಜೋಳ ಸಿಕ್ಕಿವೆ. ವಕ್ರತುಂಡ ಕೋಲ್ಡ್ ಸ್ಟೋರೇಜ್​ನಲ್ಲಿ 288.4ಕ್ವಿಂಟಾಲ್ ಸೂರ್ಯಕಾಂತಿ ಬೀಜಗಳೂ ದೊರೆತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net