

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಸಿಕ್ಕಾಪಟ್ಟೆ ಹೊಟ್ಟೆ ಉರಿ ಇದೆಯಂತೆ!
ಹೀಗಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿದ್ದರಾಮಯ್ಯ ಸದನದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದಾಗ ಅದನ್ನು ಸಮರ್ಥಿಸಿಕೊಳ್ಳಲು ಹೋಗದ ಡಿಕೆಶಿ, ಮಾಧ್ಯಮದ ಆರೋಪ ನಂಬುವುದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯರ ವಿರುದ್ಧವಾಗಿ ನಿಂತರು. ಒಂದೇ ಪಕ್ಷದಲ್ಲಿ ಇಷ್ಟೊಂದು ದ್ವೇಷ ಇರಬಾರದು ಎಂದು ಲೇವಡಿ ಮಾಡಿದರು.
'ಸಮಾಜ ಕಲ್ಯಾಣ ಖಾತೆ ನೀಡಿರುವ ಕುರಿತು ಶ್ರೀರಾಮುಲು ಅವರಿಗೆ ಸಂತೃಪ್ತಿ ಇದೆ. ಈ ಸಂಬಂಧ ಡಿ.ಕೆ. ಶಿವಕುಮಾರ್ ಮಾಡಿರುವ ಟೀಕೆಗೆ ಉತ್ತರ ನೀಡಲು ಬಯಸುವುದಿಲ್ಲ. ಆದರೆ, ಡಿ.ಕೆ. ಶಿವಕುಮಾರ್ ಇಂಧನ, ನೀರಾವರಿಯಂತಹ ದೊಡ್ಡ ಖಾತೆಯನ್ನೇ ಬಯಸುವವರು. ಹೀಗಾಗಿ, ತಮ್ಮ ಮನದ ಭಾವನೆಯನ್ನು ಶ್ರೀರಾಮುಲು ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಲೇವಡಿ ಮಾಡಿದರು.
ಈ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸಿ.ಟಿ. ರವಿ, 'ಸಿದ್ದರಾಮಯ್ಯ ಮೇಲೆ ಡಿ.ಕೆ.ಶಿವಕುಮಾರ್ಗೆ ಹೊಟ್ಟೆಉರಿ. ಹಾಗಾಗಿ ಕೇಸ್ ಹಾಕಬೇಕಿತ್ತು' ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.