ರೌಡಿ ಮಗ ಮತ್ತೊಬ್ಬ ರೌಡಿನೇ ಆಗ್ಬೇಕಾ? ಪೊಲೀಸ್​ ಕಚೇರಿಯಲ್ಲೇ ಬೆಂಕಿ ಹಚ್ಚಿಕೊಂಡು ಸಾಯ್ತೀವಿ...

jail
Published on

ಬೆಂಗಳೂರು: ರೌಡಿ ಮಗ ಮತ್ತೊಬ್ಬ ರೌಡಿನೇ ಆಗ್ಬೇಕಾ? ಪೊಲೀಸರೇ ನನ್ನ ಮಗನನ್ನ ಕ್ರಿಮಿನಲ್ ಮಾಡ್ತಿದ್ದಾರೆ. ಕಮಿಷನರ್ ಕಚೇರಿಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಮನೆ ಮಂದಿಯೆಲ್ಲಾ ಸಾಯ್ತೀವಿ... ಹೀಗಂತ ಕಣ್ಣೀರಿಟ್ಟದ್ದು ಕುಖ್ಯಾತ ರೌಡಿ ಸೈಕಲ್ ರವಿ ಪತ್ನಿ ಕೋಮಲಾ.

ಕೆಂಪೇಗೌಡ ನಗರ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿರುವ ಸೈಕಲ್ ರವಿ ಪತ್ನಿ, ನನ್ನ ಮಗನನ್ನು ಪೊಲೀಸರು ಠಾಣೆಗೆ ಕರೆ ತಂದು ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದಾರೆ. ನನ್ನ ಮಗ ಶಿವಶಂಕರ್ ಬಿಎ ಓದುತ್ತಿದ್ದಾನೆ. ಅವನನ್ನ ಒಳ್ಳೆಯ ಮನುಷ್ಯನನ್ನಾಗಿ ಮಾಡ್ಬೇಕು ಅಂತ ಕಷ್ಟ ಪಡ್ತಾ ಇದೀವಿ‌. ಎಲ್ಲ ಪೊಲೀಸರು 'ರೌಡಿ ಮಗ ರೌಡಿ ಮಗ' ಅಂತ ಹೀಯಾಳಿಸುತ್ತಿದ್ದಾರೆ‌... ಎಂದು ಕಣ್ಣೀರಿಟ್ಟರು. ಇದನ್ನೂ ಓದಿರಿ ಆನೆಗೆ ಇಬ್ಬರು ಬಲಿ: ಬಹಿರ್ದೆಸೆಗೆ ಹೋದವ ಮಸಣ ಸೇರಿದ, ಮತ್ತೊಬ್ಬ ಕಾಫಿ ಕಣದಲ್ಲೇ ಪ್ರಾಣಬಿಟ್ಟ

ಸೈಕಲ್ ರವಿ ಬೇಕು ಅಂದಾಗ ಪೊಲಿಸರು ಮನೆಯವರನ್ನ ಕರ್ಕೊಂಡು ಹೋಗ್ತಾರೆ. ನನ್ನ‌ ದೊಡ್ಡ ಮಗನನ್ನು ಕೆಜಿ ನಗರ ಪೊಲೀಸರು ಅಕ್ರಮವಾಗಿ ಕೂಡಿಟ್ಟಿದ್ದಾರೆ. ನನ್ನ ಮಗನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡ್ಬೇಕು ಎಂದು ಹೊರಾಡುತ್ತಿದ್ದೇನೆ. ಆದರೆ ಪೊಲೀಸರು ನನ್ನ ಕುಟುಂಬವನ್ನ ಬಿಡ್ತಿಲ್ಲ. ನನ್ನ ಗಂಡನ ಮುಖ ನೋಡಿ ಎಷ್ಟೋ ದಿನ ಆಯ್ತು. ನನ್ನ ತಮ್ಮ ರಾಜೇಂದ್ರನನ್ನೂ ಕರ್ಕೊಂಡು ಹೋಗಿ‌ ಟಾರ್ಚರ್ ಕೊಡ್ತಿದ್ರು. ಅವನ ಮೇಲೆ ರೌಡಿಶೀಟರ್ ಓಪನ್ ಮಾಡಿದ್ರು. ಆರು ತಿಂಗಳ ಹಿಂದೆ ರಾಜೇಂದ್ರ ಮೃತಪಟ್ಟಿದ್ದಾನೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸೈಕಲ್ ರವಿ ವಾಸವಿಲ್ಲ ಎಂದು ಕೋಮಲಾ ಗೋಳಾಡುತ್ತಿದ್ದರು.

ಇನ್ನು ತನ್ನ ಮಗನನ್ನು ಅಕ್ರಮವಾಗಿ ಕೂಡಿಟ್ಟಿದ್ದಾರೆ ಎಂದು ಕೆಜಿ ನಗರ ಪೊಲೀಸರ‌ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸೈಕಲ್ ರವಿ ಪತ್ನಿ ಕೋಮಲಾ ಸಜ್ಜಾಗಿದ್ದಾರೆ. ಹೇಬಿಯಸ್​ ಕಾರ್ಪಸ್ ಫೈಲ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net