ಕನಕಪುರ: ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿದ್ದ ರೌಡಿಶೀಟರ್ವೊಬ್ಬನನ್ನು ಮಂಗಳವಾರ ರಾತ್ರಿ ಹಂತಕರು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಬೆಂಗಳೂರಿನ ಕೆಂಗೇರಿ ಬಳಿಯ ಹೆಮ್ಮಿಗೆಪುರದ ಚಿರಂಜೀವಿ (25) ಕೊಲೆಯಾದವ. ಒಂದು ವರ್ಷದ ಹಿಂದೆ ತಲಘಟ್ಟಪುರ ಪೊಲೀಸ್ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಈತ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿ, ಜೀವಭಯದ ಹಿನ್ನೆಲೆಯಲ್ಲಿ ಪತ್ನಿಯ ಸ್ವಗ್ರಾಮ ಹಾರೋಹಳ್ಳಿ ತಾಲೂಕು ಪಿಚ್ಚನಕೆರೆ ಗ್ರಾಮದಲ್ಲಿ ವಾಸವಿದ್ದ.
ಅಜ್ಜಿಯ ಊರಾದ ಭದ್ರೇಗೌಡನದೊಡ್ಡಿಗೆ ಕಳೆದ ಶುಕ್ರವಾರ ತೆರಳಿದ್ದಾಗಹೆಬ್ಬಿದರಮೆಟ್ಟಿಲು ಹಾಗೂ ಸಮೀಪದ ಚಿಕ್ಕಕಲ್ಬಾಳು ಗ್ರಾಮದ ಯುವಕರೊಂದಿಗೆ ಜಗಳ ಮಾಡಿಕೊಂಡಿದ್ದ. ಭದ್ರೇಗೌಡನದೊಡ್ಡಿಯಲ್ಲಿ ಮಂಗಳವಾರ ರಾತ್ರಿ ನಾಲ್ವರು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ಗೌಡ, ಎಎಸ್ಪಿಗಳಾದ ರಾಮಚಂದ್ರಪ್ಪ, ಸುರೇಶ್, ಡಿವೈಎಸ್ಪಿ ಗಿರಿ, ಸರ್ಕಲ್ ಇನ್ಸ್ಪೆಕ್ಟರ್ ವಿಕಾಸ್, ಗ್ರಾಮಾಂತರ ಠಾಣಾಧಿಕಾರಿ ಆಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೊಲೆಯಾದ ಚಿರಂಜೀವಿ ಸಹೋದರ ನಂದೀಶ್ ಅವರು ಚಿಕ್ಕಕಲ್ಬಾಳು ಪ್ರಜ್ವಲ್, ಪವನ್ ಹಾಗೂ ಬೆಂಗಳೂರಿನ ಮೋಹನ್ ಮತ್ತು ಚೇತನ್ ಎಂಬುವವರು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಕನಕಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.