ಪಂಚಾಯಿತಿ ಕಚೇರಿಯಲ್ಲಿ ಕೊಳೆತ ಆಹಾರ ಸಾಮಗ್ರಿ

Bdk_wynad
Published on

ಮಂಜೇಶ್ವರ: ವಯನಾಡು ದುರಂತ ಸಂತ್ರಸ್ತರ ನೆರವಿಗಾಗಿ ಮಂಜೇಶ್ವರ ಗ್ರಾಪಂನ ನೇತೃತ್ವದಲ್ಲಿ ಸಾರ್ವಜನಿಕ ವಲಯದಿಂದ ಸಂಗ್ರಹಿಸಲಾದ ಆಹಾರ ಸಾಮಗ್ರಿಗಳು ಪಂಚಾಯಿತಿ ಕಚೇರಿಯಲ್ಲಿ ಕೊಳೆತು ನಾರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಂತ್ರಸ್ತರಿಗೆ ತಲುಪಿಸ ಬೇಕಾದ ಆಹಾರ ಸಾಮಾಗ್ರಿಗಳನ್ನು ಫಲಾನುಭವಿಗಳಿಗೆ ಕಳಿಸದೆ ಕಚೇರಿಯಲ್ಲೇ ದಾಸ್ತಾನು ಇಟ್ಟಿರುವುದು ಯಾಕಾಗಿ ಎಂಬ ಪ್ರಶ್ನೆ ಉದ್ಭವಿಸಿದೆ. ಪಂಚಾಯಿತಿ ಕಚೇರಿಯಲ್ಲಿ ಸಾಕಷ್ಟು ಆಹಾರ ಸಾಮಗ್ರಿ ಸಂಗ್ರಹವಾಗಿದ್ದು, ಅವುಗಳನ್ನು ಅಗತ್ಯವಿರುವವರಿಗೆ ತಲುಪಿಸದೆ, ಸರಿಯಾಗಿ ಸಂಗ್ರಹಣೆ ಮಾಡದ ಕಾರಣ ಕೊಳೆತು ಹಾಳಾಗಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದ್ದು, ಸಂತ್ರಸ್ತರಿಗೆ ತ್ವರಿತವಾಗಿ ನೆರವು ತಲುಪಿಸುವಲ್ಲಿ ಆಡಳಿತ ಸಮಿತಿ ವೈಫಲ್ಯ ಕಂಡಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ನಿರ್ಲಕ್ಷೃ ಹಾಗೂ ಸೂಕ್ತ ಸಮಯದಲ್ಲಿ ಪರಿಹಾರ ಕ್ರಮಕೈಗೊಳ್ಳದಿರುವ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪಂಚಾಯಿತಿ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ನಾವು ಆಹಾರ ಸಾಮಾಗ್ರಿ ಸಂಗ್ರಹಿಸಿದ ಸಮಯದಲ್ಲಿ ಈಗ ಕಳಿಸುವುದು ಬೇಡ ಎಂದು ವಯನಾಡು ಜಿಲ್ಲಾಧಿಕಾರಿಯಿಂದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ನಮ್ಮಿಂದ ವಿಳಂಬವಾಗಿದೆ. ಸಾರ್ವಜನಿಕ ವಲಯದಲ್ಲಿ ಈಗ ಈ ವಿಷಯ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಓಣಂ ಹಬ್ಬಕ್ಕೆ ಮೊದಲು ವಯನಾಡಿಗೆ ಕಳಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net