

ಮಂಗಳೂರು: ಉಳಾಯಿಬೆಟ್ಟುನಲ್ಲಿ ವಾಸವಿದ್ದ, ಹಿರಿಯ ಲೇಖಕಿ ಮನೋರಮಾ ಎಂ.ಭಟ್ (92) ವಯೋ ಸಹಜ ಅಸೌಖ್ಯದಿಂದ ಭಾನುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ವಕೀಲರು ಹಾಗೂ ಯಕ್ಷಗಾನ ಅರ್ಥಧಾರಿಯಾಗಿದ್ದ ಮುಳಿಯ ಮಹಾಬಲ ಭಟ್ ಅವರನ್ನು 20ನೇ ವಯಸ್ಸಿನಲ್ಲಿ ವಿವಾಹವಾಗಿದ್ದ ಮನೋರಮಾ ಭಟ್ ಅವರಿಗೆ ಅಭಿನಯ ಕಲೆ, ಬರವಣಿಗೆ ಹವ್ಯಾಸ ವಿದ್ಯಾರ್ಥಿ ಜೀವನದಿಂದಲೇ ಬೆಳೆಸಿಕೊಂಡಿದ್ದರು. ಪತಿಗೂ ಸಾಹಿತ್ಯದ ಆಸಕ್ತಿ ಇದ್ದುದರಿಂದ ಇವರ ಸಾಹಿತ್ಯ ಕೃಷಿ ಬೆಳವಣಿಗೆಯಾಗಿತ್ತು.
ಸಂಗೀತ, ನೃತ್ಯ, ನಾಟಕ ರಚನೆಯಲ್ಲಿ, ಅಭಿನಯದಲ್ಲಿ ಆಸಕ್ತಿ ಹೊಂದಿದ್ದರು. 40ಕ್ಕೂ ಅಧಿಕ ನಾಟಕಗಳನ್ನು ರಚಿಸಿದ್ದಾರೆ. ‘ಮೋತಿ ಪಾಠ ಕಲಿಸಿತ್ತು’, ‘ಶಬ್ದಗಳಾಗದ ಧ್ವನಿಗಳು’, ‘ಸ್ವಯಂವರ’ ಕಥಾ ಸಂಕಲನ, ಅಜ್ಜಿ ಹೇಳಿದ ಕಥೆ, ಇಂದಲ್ಲ ನಾಳೆ, ಮರದ ಕಥೆ, ಋಣಾನುಬಂಧ, ಚಂದ್ರಮತಿಯ ಕನಸು ನಾಟಕಗಳು, ಹೊಸ ಹಾದಿ, ಬಲಿ, ನಿರ್ಧಾರ, ಆಯ್ಕೆ ನಾಟಕ ಸಂಕಲನಗಳನ್ನು ರಚಿಸಿದ್ದಾರೆ.
ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಗುಲಾಬಿ ಟಾಕೀಸು ಚಲನಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದರು. 1987ರಲ್ಲಿ ಸ್ಥಾಪನೆಯಾದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷೆ, ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದರು.
ಇವರ ಸಾಧನೆಯನ್ನು ಪರಿಗಣಿಸಿ ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ಹೊಸಬಾಳೆ ಅನಂತಪ್ಪ ಸೇವಾ ಪುರಸ್ಕಾರ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕಾರ ಭಾರತಿ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.
ವಿಧವೆಯರು ಮಾಂಗಲ್ಯ ಸರ ಕುತ್ತಿಗೆಯಿಂದ ತೆಗೆಯುವುದರ ವಿರುದ್ಧ ಸ್ವತಃ ತಾನು ಕೂಡಾ ತೆಗೆಯದೆ, ತಮ್ಮ ಲೇಖನಗಳು ಹಾಗೂ ಭಾಷಣಗಳ ಮೂಲಕ ಪ್ರಬಲವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಪೊಲೀಸ್ ಇಲಾಖೆಯಲ್ಲಿ ‘ಪೇದೆ’ ಶಬ್ಧ ಬಳಕೆಯನ್ನು ಕಟುವಾಗಿ ವಿರೋಧಿಸುತ್ತಿದ್ದರು. ಠಾಣೆಗಳಿಗೆ ತೆರಳಿ ಹಿರಿಯ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿ, ಕಾನ್‌ಸ್ಟೇಬಲ್ ಎಂದು ಕರೆಯುವಂತೆ ಒತ್ತಾಯ ಮಾಡುತ್ತಿದ್ದರು.
ಮನೋರಮಾ ಭಟ್ ಅವರ ಮೃತದೇಹವನ್ನು ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ಅಮೇರಿಕಾದಲ್ಲಿರುವ ಹಿರಿಯ ಪುತ್ರ ಮಂಗಳೂರಿಗೆ ಆಗಮಿಸಿದ ಬಳಿಕ ಬುಧವಾರ ಅಥವಾ ಗುರುವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ನಿಕಟವರ್ತಿಗಳು ಮಾಹಿತಿ ನೀಡಿದ್ದಾರೆ.