ಶಿಕ್ಷಣ ಕೇತ್ರದಲ್ಲೂ ರೋಟರಿ ಸಂಸ್ಥೆ ಕ್ರಾಂತಿ

7blrp4
Published on

ಬೇಲೂರು: ರೋಟರಿ ಸಂಸ್ಥೆ ಸಾಮಾಜಿಕ ಕಾರ್ಯಗಳ ಜತೆಗೆ ಶಿಕ್ಷಣ ಕೇತ್ರದಲ್ಲೂ ಕ್ರಾಂತಿ ಮಾಡುವ ಮೂಲಕ ಎಲ್ಲ ರಂಗದಲ್ಲೂ ಛಾಪು ಮೂಡಿಸುತ್ತಿದೆ ಎಂದು ಅರೇಹಳ್ಳಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಧನಂಜಯ ಜೀವಾಳ ಹೇಳಿದರು.


ತಾಲೂಕಿನ ಅರೇಹಳ್ಳಿ ರೋಟರಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ವೈಭವ-2024’ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಚಿಕ್ಕವರಾಗಿದ್ದ ವೇಳೆ ಕಲಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಬಿಸಾಡುತ್ತಿರಲಿಲ್ಲ. ಪರಿಸರಕ್ಕೆ
ಹಾನಿಯುಂಟು ಮಾಡುವ ಪಾಲಿಕಾರ್ಮೆನ್ ಎಂಬ ವಸ್ತುವನ್ನು ಪೆನ್ನುಗಳ ಉತ್ಪಾದನೆಯಲ್ಲಿ ಬಳಸುತ್ತಾರೆ. ಹಾಗಾಗಿ ಖಾಲಿ ಪೆನ್ನುಗಳನ್ನು ಎಲ್ಲೆಂದರಲ್ಲಿ ಎಸೆಯುವುದರ ಬದಲು ಒಂದು ಕಡೆ ಶೇಖರಿಸಿಡುವುದು ಉತ್ತಮ. ಶಾಲೆ ಹಾಗೂ ಮನೆಯಲ್ಲಿ ಶಿಕ್ಷೆಯಿಂದ ವಂಚಿತರಾಗುವ ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಾರೆ. ಆದ್ದರಿಂದ ಮಕ್ಕಳಿಗೆ ಶಿಕ್ಷೆ ಮತ್ತು ಶಿಕ್ಷಣದ ಮೂಲಕ ಸಂಸ್ಕಾರ ಕಲಿಸುವಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದರು.


ರೋಟರಿ ಶಾಲೆ ಉಪಾಧ್ಯಕ್ಷ ಡಬ್ಲ್ಯೂ.ಆರ್.ಪಿಂಟೋ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳ ಅಂಕಗಳ ಬಗ್ಗೆ ಯೋಚಿಸುತ್ತಾರೆ. ಆದರೆ, ಅಂಕಗಳ ಜತೆಗೆ ಸರ್ವತೋಮುಖ ಅಭಿವೃದ್ಧಿಯಲ್ಲಿ ನಮ್ಮ ಶಾಲೆ ಪೂರಕ ಶಿಕ್ಷಣ ನೀಡುತ್ತಿದೆ. ಶಿಕ್ಷಣ ಹಾಗೂ ಸಂಸ್ಕಾರ ಬದುಕಿನ ಮೂಲ ಮಂತ್ರ. ಶಿಕ್ಷಣ ಎಂದಿಗೂ ಎಡವಲು ಬಿಡುವುದಿಲ್ಲ, ಸಂಸ್ಕಾರ ಕೆಡಲು ಬಿಡುವುದಿಲ್ಲ. ಹಿಂದಿನ ಕಾಲದಲ್ಲಿ ಪಾಲಕರು ಮಕ್ಕಳಿಗೆ ಮೌಲ್ಯಗಳನ್ನು ಕಲಿಸುತ್ತಿದ್ದರು. ಇಂದಿನ ಆಧುನಿಕ ಸಮಾಜ ಮಕ್ಕಳಲ್ಲಿ ಮೌಲ್ಯಗಳನ್ನು ಕಡಿಮೆ ಮಾಡುತ್ತಿರುವುದರಿಂದ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ಮೂಲಕ ಮೌಲ್ಯ ಶಿಕ್ಷಣವನ್ನು ಕಲಿಸಲಾಗುತ್ತಿದೆ ಎಂದು ಹೇಳಿದರು.


ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಮಮತಾ, ಶಿಕ್ಷಣ ಇಲಾಖೆ ಇಸಿಒ ಶಿವಪ್ಪ, ಅರೇಹಳ್ಳಿ ಗ್ರಾಪಂ ಅಧ್ಯಕ್ಷ ಸಂಕಪ್ಪ, ಸದಸ್ಯ ವೀರೇಶ್, ಮುಖ್ಯ ಶಿಕ್ಷಕಿ ತುಳಸಿ ಅಮ್ಮಲ್, ರೋಟರಿ ಟ್ರಸ್ಟ್ ಅಧ್ಯಕ್ಷ ಹರೀಶ್, ರೋಟರಿ ಕ್ಲಬ್ ಅಧ್ಯಕ್ಷ ಪೃಥ್ವಿ, ವಿದ್ಯಾರ್ಥಿ ಸಮಿತಿ ಅಧ್ಯಕ್ಷೆ ಆಶಿತ ಡಿಸೋಜ, ಕಾರ್ಯದರ್ಶಿ ಪ್ರಜ್ವಲ್, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net