

ಕೋಟ: ರೋಟರಿಯಂತ ಅಂತಾರಾಷ್ಟ್ರೀಯ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮ ಜನಸಾಮಾನ್ಯರನ್ನು ಹತ್ತಿರದಿಂದ ತಲುಪುತ್ತದೆ, ಅದೇ ರೀತಿ ಓರ್ವ ಕ್ರಿಯಾಶೀಲ ಸದಸ್ಯನ ಅಗಲುವಿಕೆ ನೇತ್ರ ತಪಾಸಣೆ ರೀತಿಯಲ್ಲಿ ಪ್ರತಿ ವರ್ಷ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಯಕ್ಷಗುರು ಎಚ್.ಗೋವಿಂದ ಉರಾಳ ಹೇಳಿದರು.
ಕೋಟ ಮೂರ್ಕೈಯಲ್ಲಿ ಭಾನುವಾರ ರೋಟರಿ ಕ್ಲಬ್ ಕೋಟ ಸಿಟಿ, ಕರ್ನಾಟಕ ಸರ್ಕಾರ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ, ಕೋಟ ಗ್ರಾಪಂ ಕೋಟತಟ್ಟು ಇಂದಿರಾ ಕ್ಲಿನಿಕಲ್ ಲ್ಯಾಬೊರೇಟರಿ, ಕೋಟ ಮೂರ್ಕೈ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಶಿರೂರು ಆಶ್ರಯದಲ್ಲಿ ದಿ.ಪ್ರದೀಪ್ ಕುಮಾರ್ ಶೆಟ್ಟಿ ಸ್ಮರಣಾರ್ಥ 10ನೇ ವರ್ಷದ ಕಣ್ಣಿನ ಪೊರೆ ರೋಗ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೋಟ ಸಮುದಾಯದ ಆರೋಗ್ಯ ಕೇಂದ್ರ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ ಕಣ್ಣಿನ ಮಹತ್ವ ಹಾಗೂ ದೇಹದ ಇನ್ನಿತರ ಭಾಗಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅಭ್ಯಾಗತರಾಗಿ ರೋಟರಿ ವಲಯ ಸೇನಾನಿ ನಿತ್ಯಾನಂದ ನಾಯರಿ, ಉದ್ಯಮಿ ಸಂದೀಪ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಶಿರೂರು ಮುದ್ದು ಮನೆ ವೈದ್ಯ ಡಾ.ಮನೋಜ್ ಭಟ್ ಉಪಸ್ಥಿತರಿದ್ದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಪ್ರಸ್ತಾವನೆ ಸಲ್ಲಿಸಿದರು. ರೋಟರಿ ಕ್ಲಬ್ ಕೋಟ ಸಿಟಿ ಮಾಜಿ ಅಧ್ಯಕ್ಷ ವಿಷ್ಣುಮೂರ್ತಿ ಉರಾಳ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಾ.ಗಣೇಶ್ ಉಳ್ತೂರು ನಿರೂಪಿಸಿದರು. ಮಾಜಿ ಅಧ್ಯಕ್ಷ ಸುರೇಶ್ ಆಚಾರ್ ವಂದಿಸಿದರು.