ಟ್ರಕ್‌ಬೇ ಗಗನಕುಸುಮ

mullikatte
ಮುಳ್ಳಿಕಟ್ಟೆಯಲ್ಲಿರುವ ಟ್ರಕ್ ಬೇ ವಿಶ್ರಾಂತಿ ಕೊಠಡಿ-ಸ್ನಾನಗೃಹ.
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಬೈಂದೂರು - ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆಯಲ್ಲಿ ಲಾರಿ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ ಟ್ರಕ್ ಬೇ ವಿಶ್ರಾಂತಿ ಕೊಠಡಿ, ಶೌಚಗೃಹದ ಕಾಮಗಾರಿ ಪೂರ್ಣಗೊಂಡು ಮೂರ‌್ನಾಲ್ಕು ವರ್ಷ ಕಳೆದಿದ್ದರೂ ಸಾರ್ವಜನಿಕರ ಬಳಕೆಗೆ ಸಿಗದೆ ಮರೀಚಿಕೆಯಾಗಿಯೇ ಉಳಿದಿದೆ.

ಟ್ರಕ್ ಬೇ ಹಾಗೂ ಶೌಚಗೃಹದ ಗುತ್ತಿಗೆಯನ್ನು ಹೆದ್ದಾರಿ ಗುತ್ತಿಗೆ ವಹಿಸಿಕೊಂಡಿದ್ದ ಐಆರ್‌ಬಿ ಸಂಸ್ಥೆಗೆ ವಹಿಸಲಾಗಿದ್ದು, ಸ್ನಾನಗೃಹ ಕೊಠಡಿಯನ್ನು ನಿರ್ಮಿಸುವಂತೆಯೂ ಸೂಚಿಸಲಾಗಿತ್ತು. ಟ್ರಕ್ ಬೇ ಸ್ಥಳದ ಒಂದು ಬದಿಯಲ್ಲೇ ವಿಶ್ರಾಂತಿ ಪಡೆಯಲು ಈಗಾಗಲೇ ಅವಕಾಶ ಕಲ್ಪಿಸಲಾಗಿದ್ದು, ಉಳಿದ ವ್ಯವಸ್ಥೆಗಳಾವುದೂ ಜನಬಳಕೆಗೆ ಇನ್ನೂ ದೊರೆತಿಲ್ಲ.

ಕಾಮಗಾರಿ ಮುಗಿದಿದ್ದರಿಂದ ಲಾರಿ, ಬಸ್ ಚಾಲಕರು ಹಾಗೂ ಸಾರ್ವಜನಕರಿಗೆ ನೆರವಾಗುವ ಉದ್ದೇಶದೊಂದಿಗೆ ಒಂದಷ್ಟು ದಿನ ತೆರೆದುಕೊಂಡಿದ್ದ ಟ್ರಕ್ ಬೇ ಹಾಗೂ ಶೌಚಗೃಹದಲ್ಲಿ ಸೂಕ್ತ ನಿರ್ವಹಣೆಯಿಲ್ಲದೇ ದುರ್ವಾಸನೆ ಆರಂಭವಾಗಿತ್ತು. ಜತೆಗೆ ನೀರಿನ ಸಂಪರ್ಕ ಇನ್ನೂ ಕಲ್ಪಿಸದೇ ಇರುವುದರಿಂದ ಲೋಕರ್ಪಾಣೆಗೊಂಡ 15 ದಿನಗಳಲ್ಲೇ ಮುಚ್ಚಲಾಗಿತ್ತು. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಇನ್ನಾದರೂ ಇತ್ತ ಗಮನ ಹರಿಸಬೇಕಿದ್ದು, ಶೀಘ್ರವೇ ಟ್ರಕ್ ಬೇ, ಶೌಚಗೃಹದ ಪ್ರಯೋಜನ ಲಾರಿ, ಟ್ರಕ್ ಚಾಲಕರ ಸಹಿತ ಸಾರ್ವಜನಿಕರ ಬಳಕೆಗೆ ಸಿಗುವಂತೆ ಮಾಡಬೇಕು ಎಂದು ಮುಳ್ಳಿಕಟ್ಟೆ ಸ್ಥಳೀಯರು ಒತ್ತಾಯಿಸಿದ್ದಾರೆ.

ವರ್ಷದಿಂದ ಶೌಚಗೃಹಕ್ಕೆ ಬೀಗ

ಒಂದು ವರ್ಷದಿಂದ ಶೌಚಗೃಹಕ್ಕೆ ಬೀಗ ಜಡಿಯಲಾಗಿದ್ದು, ಟ್ರಕ್ ಬೇ ವಿಶ್ರಾಂತಿ ಕೊಠಡಿ ಸಹಿತ ಎಲ್ಲ ವ್ಯವಸ್ಥೆಗಳೂ ನಿಷ್ಪ್ರಯೋಜಕವಾಗಿದೆ. ಜತೆಗೆ ಟ್ರಕ್ ಬೇ ಕಟ್ಟಡದ ಇನ್ನೊಂದು ಬದಿಯಲ್ಲಿ ಸಣ್ಣ ವಿಶ್ರಾಂತಿ ಗೃಹವಿದ್ದು, ಸೂಕ್ತ ನಿರ್ವಹಣೆಯಿಲ್ಲದ ಕಾರಣ ಕೊಠಡಿಯ ಟೈಲ್ಸ್ ವರ್ಷದೊಳಗೆ ಕಿತ್ತುಹೋಗಿವೆ. ಇದರಿಂದಾಗಿ ಸರಕು ಲಾರಿಗಳನ್ನು ಮರವಂತೆಯ ಬಳಿಯೆ ನಿಲುಗಡೆಗೊಳಿಸಿ ಚಾಲಕರು ವಿಶ್ರಾಂತಿ ಪಡೆಯುವ ಪರಿಸ್ಥಿತಿ ಎದುರಾಗಿದೆ. ಪ್ರವಾಸಿಗರಿಗೂ ಬೀಚ್ ವೀಕ್ಷಣೆಗೆ ಅಡ್ಡಿಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆಯಲ್ಲಿ ಲಾರಿ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರಿಗಾಗಿ ನಿರ್ಮಿಸಿದ ಟ್ರಕ್ ಬೇ ವಿಶ್ರಾಂತಿ ಕೊಠಡಿ, ಶೌಚಗೃಹದ ಕಾರ‌್ಯ ಪೂರ್ಣಗೊಂಡು ಮೂರ‌್ನಾಲ್ಕು ವರ್ಷ ಕಳೆದಿದ್ದರೂ ಇನ್ನೂ ಇದರ ಪ್ರಯೋಜನ ಯಾರಿಗೂ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕಿದ್ದು, ಸರ್ವ ವ್ಯವಸ್ಥೆಗಳೂ ಶೀಘ್ರವೇ ಸಿಗುವಂತಾಗಬೇಕು. ಶಂಕರ ವಾಹನ ಚಾಲಕ https://www.vijayavani.net/the-campaign-heralds-a-new-chapter https://www.vijayavani.net/investor-awareness-program-in-padukare

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net