

ವಿಜಯವಾಣಿ ಸುದ್ದಿಜಾಲ ಕಾರ್ಕಳ
ತಾಲೂಕಾದ್ಯಂತ ಭಾರಿ ಗಾಳಿ ಮಳೆ ಶನಿವಾರವೂ ಮುಂದುವರಿದಿದ್ದು, ಮನೆ, ಕೃಷಿಗೆ ಅಪಾರ ಹಾನಿಯಾಗಿವೆ. ಕಲ್ಯಾ ಗ್ರಾಮದ ಬಂಡಸಾಲೆ ನಿವಾಸಿ ವಸಂತ, ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ನಿವಾಸಿ ಶೋಭಾ ಪೈ, ಕಂಬಳಬೆಟ್ಟು ನಿವಾಸಿ ರಮೇಶ್, ನಿಟ್ಟೆ ಗ್ರಾಮದ ದೂಪಲ್ಲಿನ ವಿಜಯ ಕುಂಜ, ಕಾರಾಡಿ ದರ್ಖಾಸು ನಿವಾಸಿ ರಜನಿ ಹಾಗೂ ಬೊರ್ಗಲ್‌ಗುಡ್ಡೆಯ ಶಾಲಿನಿ ಮನೆ ಮೇಲೆ ಮರ ಉರುಳಿ ಹಾನಿಯಾಗಿದೆ. ಭಾರಿ ಗಾಳಿಗೆ ಬೆಳ್ಮಣ್ ಗ್ರಾಮದ ಪುನರ್ ನಿವಾಸಿ ಸುನಿತಾ ನಾಯಕ್ ಮನೆಯ ಶೀಟುಗಳು ಹಾರಿಹೋಗಿವೆ. ಕುಕ್ಕುಂದೂರು ಗ್ರಾಮದ ಪೊಸನೊಟ್ಟು ಸುರೇಶ್ ರಾವ್ ಅಡಕೆ ತೋಟದಲ್ಲಿ ಕೃಷಿ ನಾಶವಾಗಿದೆ.
ಹೆಬ್ರಿ ತಾಲೂಕಿನಲ್ಲಿ ಶುಕ್ರವಾರದ ಗಾಳಿ ಮಳೆಯ ರಭಸಕ್ಕೆ 50ಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳು ಮುರಿದಿವೆ. ತಾಲೂಕಿನ ಬಹುತೇಕ ಕಡೆ ಕತ್ತಲಾವರಿದೆ. ಸತತ ಎರಡು ದಿನಗಳಿಂದ ಎಇಇ ನಾಗರಾಜ್, ಜೆಇ ಲಕ್ಷ್ಮೀಶ ನೇತೃತ್ವದಲ್ಲಿ ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಾರ್ಕಳ: ದುರ್ಗಾ ಗ್ರಾಮದ ಬೆದ್ರಪಲ್ಕೆ ಲಲಿತಾ ನಾಯ್ಕ, ಕಡಂಬಳ ನಿವಾಸಿ ಜೂಲಿಯಾನ, ಕಣಜಾರು ಗ್ರಾಮದ ಜಗನ್ನಾಥ್ ಶೆಟ್ಟಿ, ಬೈಲೂರು ಗ್ರಾಮದ ಶಾಕುಂತಳಾ ಮನೆಗಳ ಮೇಲೆ ಮರ ಉರುಳಿದೆ. ಬೋಳ ಗ್ರಾಮದ ಹೊಸಮನೆ ದೇವಕಿ ಆಚಾರ್ಯ ಭತ್ತದ ಗದ್ದೆಗೆ ತೋಡಿನ ನೀರು ನುಗ್ಗಿದ್ದು, ಬೋಳ ಗ್ರಾಮದ ನಾಗುಲ್ಲು ನಿವಾಸಿ ಸುಂದರ ಪೂಜಾರಿ ತೋಟದ ಬೆಳೆ ನಾಶವಾಗಿದೆ. ಹಿರ್ಗಾನ ಗ್ರಾಮದ ಪೆಲತ್ತಿಜೆ ಜಾರ್ಜ್ ಡಿ ಅಲ್ಮೆಡಾ ಅಂಗಡಿ ಕೋಣೆಯ ಮೇಲ್ಛಾವಣಿ ಹಾರಿಹೋಗಿದ್ದು, ಕಾರ್ಕಳದ ಅನಂತ ಶಯನ ಅಶ್ವಿನಿ ಗಣೇಶ್ ರಾವ್ ಅವರ ವಾಣಿಜ್ಯ ಕಟ್ಟಡ ನೆಲಸಮವಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ ತೋಟಗಾರಿಕೆ ಸಂಬಂಧಿಸಿದ 5 ಸಾವಿರಕ್ಕೂ ಹೆಚ್ಚು ಗಿಡ ಮರಗಳಿಗೆ ಹಾನಿಯಾಗಿದ್ದು, ಕಾರ್ಕಳ ತೋಟಗಾರಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಕಬ್ಬಿನಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ವಿಜಯವಾಣಿಯೊಂದಿಗೆ ಮಾತನಾಡಿ, ಈ ಬಾರಿಯ ಗಾಳಿ ಮಳೆಯಿಂದ ರೈತರಿಗೆ ಹಾನಿಯಾಗಿದೆ. ಈ ಪೈಕಿ ಅಡಕೆ ಬೆಳೆಗಾರರು ಹೆಚ್ಚು ನಷ್ಟಕ್ಕೊಳಗಾಗಿದ್ದಾರೆ. ಪ್ರತೀ ರೈತನನ್ನೂ ಭೇಟಿ ಮಾಡಲಾಗುತ್ತಿದ್ದು, ಪರಿಹಾರ ವ್ಯವಸ್ಥೆ ಮಾಡಲಾಗುವುದು ಎಂದರು. ಗ್ರಾಮ ಆಡಳಿತ ಅಧಿಕಾರಿ ನವೀನ್‌ಕುಮಾರ್ ಕುಕ್ಕುಜೆ ಜತೆಗಿದ್ದರು.