

ಮಳವಳ್ಳಿ: ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೆಲುವಿಗಾಗಿ ಹರಕೆ ಹೊತ್ತಿದ್ದ ವ್ಯಕ್ತಿಯೊಬ್ಬರು ಗುರುವಾರ ಪಟ್ಟಣ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಉರುಳು ಸೇವೆ ಮಾಡುವ ಮೂಲಕ ಹರಕೆ ತೀರಿಸಿದರು.
ತಾಲೂಕಿನ ದಾಸನದೊಡ್ಡಿ ಗ್ರಾಮದ ಪುಟ್ಟಸ್ವಾಮಿ ಹರಕೆ ಕಟ್ಟಿಕೊಂಡಿದ್ದವರು. ಜೂ.4ರಂದು ಹೊರಬಂದ ಚುನಾವಣಾ ಫಲಿತಾಂಶದಲ್ಲಿ ಎಚ್‌ಡಿಕೆ ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಭರ್ಜರಿ ಜಯಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಅವರು ದೇವರ ಹರಕೆ ತೀರಿಸಲು ಮಾರೇಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಹಲವು ಮುಖಂಡರೊಡನೆ ಆಗಮಿಸಿದ್ದು, ಮುಂಭಾಗದ ಕೊಳದಲ್ಲಿ ಸ್ನಾನ ಮಾಡಿ ದೇವಾಲಯದ ಪ್ರಾಂಗಣದ ಸುತ್ತಲೂ ಉರುಳು ಸೇವೆ ನೆರವೇರಿಸಿದರು.
ನಂತರ ಲಕ್ಷ್ಮೀ ನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಹೊರಬಂದು ಮಾತನಾಡಿದ ಅವರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಮಾನ್ಯ ವರ್ಗದ ಜನರು ಮೆಚ್ಚುವಂತಹ ಮತ್ತು ಅನ್ನದಾತರ ಪರವಾದ ಆಡಳಿತ ನಡೆಸಿದ್ದಾರೆ. ಅಂತಹವರ ಸೇವೆ ರಾಜ್ಯದ ಜನಸಾಮಾನ್ಯರಿಗೆ ಅಗತ್ಯವಿದೆ. ಯಾವುದೋ ಆಮಿಷಗಳಿಗೆ ಳಗಾಗಿ ಉತ್ತಮ ಆಡಳಿತಗಾರನನ್ನು ಕಳೆದುಕೊಳ್ಳಬಾರದೆಂದು ಲೋಕಸಭಾ ಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಎಚ್‌ಡಿಕೆ ಸ್ಪರ್ಧಿಸುವ ಬಗ್ಗೆ ಘೋಷಣೆಯಾದ ದಿನವೇ ಇಲ್ಲಿನ ದೇವಸ್ಥಾನಕ್ಕೆ ಬಂದು ದೇವರಲ್ಲಿ ಯಾವುದೇ ತೊಡಕಿಲ್ಲದೆ ಒಬ್ಬ ಒಳ್ಳೆಯ ಜನನಾಯಕ ಕುಮಾರಸ್ವಾಮಿ ಆಯ್ಕೆಗೆ ಪ್ರಾರ್ಥನೆ ಸಲ್ಲಿಸಿ ಹರಕೆ ಕಟ್ಟಿಕೊಂಡಿದ್ದೆ, ನಮ್ಮ ಭಾವನೆಗೆ ಅನುಗುಣವಾಗಿ ಇಷ್ಟಾರ್ಥ ಸಿದ್ಧಿಯನ್ನು ನೀಡಿರುವ ಭಗವಂತನಿಗೆ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.
ಮುಖಂಡರಾದ ರಾಮೇಗೌಡ, ಮಹೇಶ, ಸಿದ್ದೇಗೌಡ, ತಿಮ್ಮೇಗೌಡ, ತಿರುಮಲೇಗೌಡ, ವೆಂಕಟೇಗೌಡ, ಮರಿಸ್ವಾಮಿ, ಸಣ್ಣೇಗೌಡ, ಕೆಂಪೇಗೌಡ ಮತ್ತಿತರರಿದ್ದರು.