ಮುಖಕ್ಕೆ ಸ್ಪ್ರೇ ಸಿಂಪಡಿಸಿ ನಗದು, ಚಿನ್ನಾಭರಣ ದರೋಡೆ

Published on

 ದಾರಿ ಕೇಳುವ ನೆಪದಲ್ಲಿ ಕೃತ್ಯ | 33 ಗ್ರಾಂ ಚಿನ್ನಾಭರಣ, ₹15 ಸಾವಿರ ದೋಚಿದ ದುಷ್ಕರ್ಮಿಗಳು

ಚಿಂತಾಮಣಿ : ಕಾರನ್ನು ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಚಾಲಕನ ಮುಖಕ್ಕೆ ಸ್ಪ್ರೇ ಸಿಂಪಡಿಸಿ ನಗದು, ಚಿನ್ನಾಭರಣ ಮತ್ತು 30 ಲೀಟರ್ ಡೀಸೆಲ್ ದೋಚಿರುವ ಘಟನೆ ತಾಲೂಕಿನ ಮುತ್ತಕದಹಳ್ಳಿ ಕುಂಟೆಯ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಕೋಲಾರ ತಾಲೂಕಿನ ಮದನಹಳ್ಳಿಯ ಶೇಖರ್‌ರೆಡ್ಡಿ (45) ದರೋಡೆಗೊಳಗಾದವರು. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದನಹಳ್ಳಿ ಗ್ರಾಮದ ಶೇಖರ್‌ರೆಡ್ಡಿ ಅವರು ಟ್ರ್ಯಾಕ್ಟರ್‌ಗೆಂದು ಕೈವಾರ ಕ್ರಾಸ್‌ನಲ್ಲಿರುವ ಬಂಕ್‌ನಲ್ಲಿ ಡೀಸೆಲ್ ಅನ್ನು ಕ್ಯಾನ್‌ನಲ್ಲಿ ತುಂಬಿಸಿಕೊಂಡು ವಾಪಸ್ ಕಾರಿನಲ್ಲಿ ಹೋಗುತ್ತಿದ್ದಾಗ ರಾತ್ರಿ ಸುಮಾರು 9.30ರ ಸಮಯದಲ್ಲಿ ಮುತ್ತಕದಹಳ್ಳಿ ಕುಂಟೆಯ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಕಾರನ್ನು ನಿಲ್ಲಿಸಿ ಕೈವಾರ ಕ್ರಾಸ್‌ಗೆ ಹೋಗೋದು ಹೇಗೆ ಎಂದು ಕೇಳಿದ್ದಾನೆ. ಜತೆಯಲ್ಲಿ ಮತ್ತೊಂದು ದ್ವಿಚಕ್ರವಾಹನದಲ್ಲಿ ಇಬ್ಬರು ಬಂದಿದ್ದಾರೆ. ಈ ವೇಳೆ ರಸ್ತೆ ತೋರಿಸುತ್ತಿದ್ದಾಗ ಎದುರಿಗಿದ್ದ ವ್ಯಕ್ತಿ ಕಣ್ಣಿಗೆ ಯಾವುದೋ ಸ್ಪ್ರೇ ಸಿಂಪಡಿಸಿದ. ನಂತರ ನನಗೆ ತಡರಾತ್ರಿ 2.30ರ ಸಮಯದಲ್ಲಿ ಎಚ್ಚರವಾದಾಗ ಕೈವಾರ್ ಕ್ರಾಸ್- ವೇಮಗಲ್ ರಸ್ತೆಯಲ್ಲಿರುವ ರಾಮಾಪುರ ಗೇಟ್ ಬಳಿ ಇದ್ದೆ. ನನ್ನ ಕತ್ತಿನಲ್ಲಿದ್ದ 15 ಗ್ರಾಂ ಚಿನ್ನದ ಸರ, ಕೈಯಲ್ಲಿದ್ದ 18 ಗ್ರಾಂ ಚಿನ್ನದ ಬ್ರೇಸ್‌ಲೆಟ್ ಹಾಗೂ ಜೇಬಿನಲ್ಲಿದ್ದ 15,000 ರೂ. ಮತ್ತು ಕ್ಯಾನ್‌ನಲ್ಲಿದ್ದ 30 ಲೀಟರ್ ಡೀಸೆಲ್ ಕಾಣೆಯಾಗಿತ್ತು ಎಂದು ಶೇಖರ್‌ರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net