

ತುಮಕೂರು: ನಗರದ ವಿವಿಧಡೆ ರೈಲ್ವೆ ಮೇಲ್ಸೇತುವೆ ನಿಮಾರ್ಣ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಪದಾಧಿಕಾರಿಗಳು ಸ್ಥಳಿಯರ ಜತೆ ಸೇರಿ ಮಂಗಳವಾರ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರದ ಬಡ್ಡಿಹಳ್ಳಿ ಗೇಟ್, ಬಟವಾಡಿ ಗೇಟ್, ಕ್ಯಾತಸಂದ್ರದ ಮೈದಾಳ ಗೇಟ್, ಅರೆಯೂರು ಗೇಟ್, ನಿಟ್ಟೂರು ಬಳಿಯ ರೈಲ್ವೆ ಗೇಟ್ಗಳನ್ನು ತೆರವು ಮಾಡಿ 350 ಕೋ.ರೂ., ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆ ಮಂಗಳವಾರ ಬಟವಾಡಿ, ಬಡ್ಡಿಹಳ್ಳಿ ರೈಲ್ವೆ ಗೇಟ್ ಬಳಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಈ ಕಾರ್ಯಕ್ಕೆ ನೆರವಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಗೆ ಧನ್ಯವಾದ ತಿಳಿಸಿ, ಜಯಘೋಷಗಳನ್ನು ಹಾಕಿದರು.
ಈ ವೇಳೆ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಅಭಿವೃದ್ಧಿ ಹರಿಕಾರರೆಂದೇ ಹೆಸರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಧಿಕಾರ ವಹಿಸಿಕೊಂಡ 35 ದಿನಗಳಲ್ಲೇ ನಗರ ಹಾಗೂ ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ. ಇದು ಸಚಿವರ ಇಚ್ಛಾಶಕ್ತಿಗೆ ಕಾರಣ. ಈ ಸೇತುವೆ ನಿಮಾರ್ಣ ವೆಚ್ಚದ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಒದಗಿಸಲಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಇಲ್ಲ ಎಂದರು.
ಸ್ಫೂರ್ತಿ ಡೆವಲಪರ್ಸ್ನ ಎಸ್.ಪಿ.ಚಿದಾನಂದ್ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರದಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿಮಾರ್ಣ ಅತ್ಯಗತ್ಯವಾಗಿದ್ದು, ಸಚಿವ ಸೋಮಣ್ಣ ಹಾಗೂ ಶಾಸಕ ಜ್ಯೋತಿಗಣೇಶ್ ಅವರು ಈ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎಚ್.ಎಂ.ರವೀಶಯ್ಯ, ಮುಖಂಡರಾದ ಎಂ.ವೈ.ರುದ್ರೇಶ್, ಜಗದೀಶ್, ಪ್ರಕಾಶ್ ಭಾರಧ್ವಜ್, ಹನುಮಂತಪ್ಪ, ಕೆ.ಎಸ್.ಕುಮಾರ್, ಜಯಪ್ರಕಾಶ್, ಮಸೀದಿಯ ಮುತುವಲ್ಲಿ ರಹಮತ್ ಉಲ್ಲಾ ಖಾನ್, ನಿವೃತ್ತ ಪ್ರಾಚಾರ್ಯ ನರಸಿಂಹನ್, ಕೃಷ್ಣಮೂರ್ತಿ, ನಟರಾಜ್, ರುದ್ರಪ್ಪ, ಮರಿಬಸಪ್ಪ, ಉಮಾಮಹೇಶ್, ಅಂಗಡಿ ಮಂಜುನಾಥ್, ಎಚ್ಎಂಟಿ ಆಂಜನಪ್ಪ, ನಿಶ್ಚಲ್, ಚೇತನ್, ಮೂರ್ತಿ, ಮಮತಾ, ಲತಾ, ಪವಿತ್ರಾ, ಸಂಧ್ಯಾ, ಅನ್ನಪೂರ್ಣಮ್ಮ, ಗಾಯತ್ರಿ, ಶಿಲ್ಪ, ಶಶಿ, ಉಮಾ ಮತ್ತಿತರರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ತುಮಕೂರಿಗರ ಬಹುದಿನಗಳ ಬೇಡಿಕೆಯಾದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ 35 ದಿನಗಳಲ್ಲೇ ಈ ಯೋಜನೆಗಳಿಗೆ ಅನುಮೋದನೆ ಪಡೆದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣಗೆ ನಗರ ಹಾಗೂ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುವೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ ಜನರ ಬಹುದಿನಗಳ ರೈಲ್ವೆ ಮೇಲ್ಸೇತುವೆ ಬೇಡಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರ ಜತೆಗೆ ನಗರದ ರೈಲ್ವೆ ನಿಲ್ದಾಣದ ಉನ್ನತಿಕರಣ, ತುಮಕೂರು-&ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗದ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಜನರಿಗೆ ಅರ್ಪಣೆ ಮಾಡಲು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಸಂಕಲ್ಪ ಮಾಡಿದ್ದಾರೆ. ಸಚಿವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಯ ಜನರು ನಿರೀಕ್ಷೆ ಮಾಡಬಹುದಾಗಿದೆ. ಎಚ್.ಎಸ್.ರವಿಶಂಕರ್ ಜಿಲ್ಲಾಧ್ಯಕ್ಷ, ಬಿಜೆಪಿ