ಸ್ವಚ್ಛ ಭಾರತ ಅಭಿಯಾನವನ್ನು ಅಣಕಿಸುವ ರಸ್ತೆ ಪಕ್ಕದ ತ್ಯಾಜ್ಯಗಳು

Litter.
Published on

ಕಾರವಾರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಪಕ್ಕ ಬೀಳುತ್ತಿರುವ ಕಸದ ರಾಶಿಗಳು ಸ್ವಚ್ಛ ಭಾರತ ಮಿಷನ್ ಯೋಜನೆಯ ಕಾರ್ಯವೈಖರಿಯನ್ನು ಅಣಕಿಸುವಂತಿವೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಎಲ್ಲ ಗ್ರಾಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಗ್ರಾಪಂಗೆ ಮನೆ, ಮನೆ ಕಸ ಸಂಗ್ರಹಕ್ಕೆ ವಾಹನಗಳನ್ನು ನೀಡಲಾಗುತ್ತಿದೆ. ಸ್ವಚ್ಛತೆಗಾಗಿ ಸ್ವ ಸಯಾ ಸಂಘಗಳ ಮೂಲಕ ಕಾರ್ಮಿಕರನ್ನು ಪಡೆಯಲು ಅವಕಾಶ ನೀಡಲಾಗಿದೆ. 15 ನೇ ಹಣಕಾಸು ಆಯೋಗದ ನಿಧಿಯಲ್ಲಿ ಸ್ವಚ್ಛತೆಗಾಗಿ ಅನುದಾನ ಮೀಸಲಿಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಈ ಕಾರ್ಯ ನಡೆದಿದೆ. ಉತ್ತರ ಕನ್ನಡ 229 ಗ್ರಾಮ ಪಂಚಾಯಿತಿಗಳ ಪೈಕಿ 214 ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛತೆಗಾಗಿ ವಾಹನ ವಿತರಿಸಲಾಗಿದೆ. 215 ಗ್ರಾಮ ಪಂಚಾಯಿತಿಗಳಲ್ಲಿ ಒಣ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. 190 ಗ್ರಾಮ ಪಂಚಾಯಿತಿಗಳಲ್ಲಿ ಸ್ವ ಸಹಾಯ ಸಂಘಗಳಿಗೆ ತರಬೇತಿ ನೀಡಿ ಅವರು ಮನೆಗಳಿಂದ ಕಸ ಸಂಗ್ರಹಣೆ, ಒಣ ತ್ಯಾಜ್ಯ ವಿಲೇವಾರಿ ಮುಂತಾದ ಕಾರ್ಯ ಮಾಡುತ್ತಿದ್ದಾರೆ. ಸಮಸ್ಯೆ ಇದ್ದಲ್ಲಿ ಅಥವಾ ಜನದಟ್ಟಣೆ ಕಡಿಮೆ ಇರುವ ಗ್ರಾಪಂಗಳಲ್ಲಿ ಪಕ್ಕದ ಗ್ರಾಪಂಗಳೊಂದಿಗೆ ಸೇರಿಸಿ ಕ್ಲಸ್ಟರ್ ಮಾಡಿ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಮಿಷನ್ ಮೋಡ್ ಮಾಡದರಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆ ನಡೆಯುತ್ತಿದೆ. ಪ್ರತಿ ವರ್ಷ ಕೋಟ್ಯಂತರ ರೂ.ಗಳನ್ನು ಇದೇ ಕಾರ್ಯಕ್ಕಾಗಿ ವಿನಿಯೋಗಿಸಲಾಗುತ್ತಿದೆ. ಆದರೆ, ರಸ್ತೆ ಬದಿ ಕಸ ಬೀಳುವುದು ಮಾತ್ರ ಕಡಿಮೆಯಾಗಿಲ್ಲ.
ಕಸ ವಿಲೇವಾರಿ ವ್ಯವಸ್ಥೆಗೆ ಜಿಲ್ಲೆಗೆ ಮಾದರಿ ಗ್ರಾಮ ಪಂಚಾಯಿತಿ ಎಂದು ಗುರುತಿಸಿರುವ ಕಾರವಾರ ತಾಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯಿತಿಯ ಪ್ರತಿ ರಸ್ತೆಯೂ ಕಸದಿಂದ ತುಂಬಿದೆ. ಇದು ಒಂದು ಗ್ರಾಮ ಪಂಚಾಯಿತಿ ಸಮಸ್ಯೆಯಲ್ಲ ಜಿಲ್ಲೆಯ ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆಗಳ ಪಕ್ಕದ ಕಸಗಳ ರಾಶಿಗಳಿಗೆ ಇನ್ನೂ ಮುಕ್ತಿ ದೊರಕಿಲ್ಲ.

ಗ್ರಾಪಂಗಳಲ್ಲಿ ನಿರ್ಲಕ್ಷ್ಯ

ಗ್ರಾಪಂಗಳು ಮನೆ, ಮನೆ ಕಸ ಸಂಗ್ರಹಕ್ಕೆ ಒತ್ತು ಕೊಡುತ್ತಿವೆಯೇ ಹೊರತು ರಸ್ತೆ ಬದಿ ಕಸ ಸಂಗ್ರಹಕ್ಕೆ ಮುಂದಾಗುತ್ತಿಲ್ಲ. ಅಂಗಡಿ ಮುಂಗಟ್ಟುಗಳು, ಬಸ್ ನಿಲ್ದಾಣಗಳ ಅಕ್ಕಪಕ್ಕ ಕಸದ ರಾಶಿಗಳು ದೊಡ್ಡ ಪ್ರಮಾಣದಲ್ಲಿ ಬೀಳುತ್ತಿದೆ. ಊರು ತುಂಬ ಮದ್ಯದ ಬಾಟಲಿಗಳು ಬೀಳುತ್ತಿವೆ. ಕಸ ಎಸೆಯುವ ಅಂಗಡಿಗಳಿಗೆ, ಮದ್ಯದ ಅಂಗಡಿಗಳಿಗೆ ದಂಡ ಹಾಕುವುದು. ಅವುಗಳ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಸೂಚಿಸುವ ಯಾವ ಕಾರ್ಯಗಳೂ ಗ್ರಾಮ ಪಂಚಾಯಿತಿಗಳಿಂದ ನಡೆಯುತ್ತಿಲ್ಲ. ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಗ್ರಾಪಂಗಳು ವಿಫಲವಾಗಿವೆ.

ಎಲ್ಲೆಲ್ಲಿ ಸಮಸ್ಯೆ ..?

  • *ಕಾರವಾರದ ಚಿತ್ತಾಕುಲಾ, ಶಿರಸಿಯ ಬನವಾಸಿ ಮುಂತಾದ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಅಂಗಡಿಗಳು, ಒತ್ತಟ್ಟಿನ ಮನೆಗಳು, ಅಪಾರ್ಟ್ಮೆಂಟ್‌ಗಳಿದ್ದು, ಸ್ವಚ್ಛತಾಗಾರರು, ಅನುದಾನಗಳ ಕೊರತೆಯಿಂದ ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ.
  • *ಗೋಕರ್ಣ, ಮಾವಳ್ಳಿ(ಮುರ್ಡೇಶ್ವರ)ಹೀಗೆ ಪ್ರವಾಸಿಗರು ಹೆಚ್ಚು ಬರುವ ಗ್ರಾಪಂಗಳಲ್ಲಿಯೂ ರಸ್ತೆ ಪಕ್ಕ ಕಸ ಸಾಕಷ್ಟು ರಾಶಿ ಬೀಳುತ್ತಿದ್ದು, ಗ್ರಾಪಂಗಳು ಕಸ ವಿಲೇವಾರಿ ಮಾಡುವುದು ಸವಾಲಾಗಿದೆ.
  • *ಕಾರವಾರದ ಕಡವಾಡ, ಶಿರವಾಡ, ಶಿರಸಿಯ ಸದಾಶಿವಳ್ಳಿ, ಇಸಳೂರು ಹೀಗೆ ನಗರಗಳಿಗೆ ಸೇರಿಕೊಂಡಿರುವ ಗ್ರಾಮ ಪಂಚಾಯಿತಿಗಳಲ್ಲಿ ನಗರದಿಂದ ಬರುವ ಜನ ಕಸ ಎಸೆದು ಹೋಗುವುದು ಜಾಸ್ತಿ ಇದೆ.
  • *ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಹಾದು ಹೋಗುವ ಹಲವು ಗ್ರಾಮ ಪಂಚಾಯಿತಿಗಳಲ್ಲಿ ವಾಹನ ಸವಾರರು ಕಸ ಎಸೆದು ಹೋಗುತ್ತಿದ್ದು, ರಸ್ತೆಯ ಇಕ್ಕೆಲಗಳು ಕಸದಿಂದ ತುಂಬುತ್ತಿವೆ.

ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆಗಳ ಪಕ್ಕ ಇರುವ ಕಸಗಳನ್ನೂ ಸಂಗ್ರಹಿಸಲು ಸೂಚನೆ ನೀಡಲಾಗುವುದು. ಜನರು ಕಸ ಎಸೆಯುವ ಬ್ಲ್ಯಾಕ್‌ ಸ್ಪಾಟ್‌ ಗುರುತಿಸಿ ಸಿಸಿ ಕ್ಯಾಮರಾ ಅಳವಡಿಸುವ ಅಥವಾ ಅದನ್ನು ಸ್ವಚ್ಛ ಮಾಡುವ ಎಲ್ಲ ಕ್ರಮ ವಹಿಸುವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗುವುದು.ಈಶ್ವರ ಕಾಂದೂಜಿಪಂ ಸಿಇಒ, ಉತ್ತರ ಕನ್ನಡ……

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net