ಮಳೆ ನೀರಿಗೆ ಕೆರೆಯಂತಾದ ರಸ್ತೆಗಳು

5cmy6
ರಾತ್ರಿ ಮತ್ತು ಮಧ್ಯಾಹ್ನ ಮಳೆ ಬಂದಾಗ ಚಿಂತಾಮಣಿ ನಗರದ ರಾಷ್ಟ್ರೀಯ ಹೆದ್ದಾರಿ 234 ರಸ್ತೆಯಾದ ಎಂ.ಜಿ. ರಸ್ತೆಯ ಬೊಂಬುಬಜಾರ್ ರಸ್ತೆಯಿಂದ ಚೇಳೂರು ವೃತ್ತದವರೆಗೂ ನಿಂತಿರುವ ಮಳೆ ನೀರು.
Published on


ಚಿಂತಾಮಣಿಯಲ್ಲಿ ಜನಜೀವನ ಅಸ್ತವ್ಯಸ್ತ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಆಕ್ರೋಶ

ಚಿಂತಾಮಣಿ: ಮುಂಗಾರು ಮಳೆ ಆರಂಭವಾಗಿದ್ದು, ಈಗಾಗಲೇ ಜಿಲ್ಲಾಡಳಿತ ಪ್ರತಿ ತಾಲೂಕು ಮತ್ತು ಸ್ಥಳೀಯ ಆಡಳಿತಕ್ಕೆ ಮುಂಜಾಗ್ರತೆ ವಹಿಸುವಂತೆ ನಿರ್ದೇಶನ ನೀಡಿದ್ದರೂ ನಗರಸಭೆಯ ನಿರ್ಲಕ್ಷ್ಯದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಂಗಳವಾರ ಸುರಿದ ಮಳೆಗೆ ನಗರದ ಬಹುತೇಕ ರಸ್ತೆಗಳಲ್ಲಿ ನೀರು ನಿಂತು ಮನೆಗಳಿಗೆ, ಅಂಗಡಿಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ರಾಜಕಾಲುವೆ, ಪೋಷಕ ಕಾಲುವೆಗಳ ಒತ್ತುವರಿ ತೆರವು, ಚರಂಡಿಗಳ ಸ್ವಚ್ಛತೆ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿ ತಿಂಗಳು ಕಳೆದರೂ ನಗರಸಭೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿಲ್ಲ. ಚರಂಡಿಗಳಲ್ಲಿ ಕಸಕಡ್ಡಿ ತುಂಬಿ ಮಳೆ ನೀರು ಸರಾಗವಾಗಿ ಹರಿಯದೆ ತಗ್ಗುಪ್ರದೇಶ ಹಾಗೂ ಮನೆಗಳಿಗೆ ನುಗ್ಗುತ್ತಿದೆ. ಈ ಹಿಂದೆಯೂ ಸಮಸ್ಯೆಯಾದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಬಿಟ್ಟರೇ ಬೇರೇನೂ ಆಗಿಲ್ಲ.

ಚರಂಡಿಯಲ್ಲಿ ಕಸಕಡ್ಡಿ
ಮತ್ತೊಂದು ಮಳೆಗಾಲ ಬರುವವರೆಗೂ ಜನರ ಸಮಸ್ಯೆ ಮರೆತು ಹೋಗುತ್ತಿರುವ ಪರಿಣಾಮ ಬಹುತೇಕ ರಾಜಕಾಲುವೆಗಳು, ಚರಂಡಿಗಳು ಒತ್ತುವರಿಯಾಗಿ ಪಥ ಬದಲಿಸಿವೆ. ಚರಂಡಿಗಳಲ್ಲಿ ಪ್ಲಾಸ್ಟಿಕ್ ಮತ್ತು ಕಸಕಡ್ಡಿ ತುಂಬಿಕೊಂಡು ಶುಚಿತ್ವ ಮಾಯವಾಗಿದೆ. ಕೂಡಲೇ ಜಿಲ್ಲಾಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ದೂರು ನೀಡಿದಾಗ ಸ್ಥಳಕ್ಕೆ ಬರುವ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚಿಸಿ ಹೋಗುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈಗಲಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ.

ರಾಜಕಾಲುವೆ ಸ್ವರೂಪವೇ ಬದಲು!
ದಿನದಿಂದ ದಿನಕ್ಕೆ ರಾಜಕಾಲುವೆಗಳ ಸ್ವರೂಪವೇ ಬದಲಾಗುತ್ತಿವೆ. 20ರಿಂದ 30 ಅಡಿ ಇದ್ದ ರಾಜಕಾಲುವೆಗಳು ಒತ್ತುವರಿ ಮಾಡಿ 3-4 ಅಡಿಗೆ ಇಳಿದಿವೆ. ಕೆಲವು ಕಡೆ ಕುರುಹು ಸಿಗದಂತೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಇನ್ನು ಹಲವು ಕಡೆ ಒತ್ತುವರಿ ಮಾಡುತ್ತಿದ್ದರೂ ಅದರತ್ತ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸುವುದೇ ಇಲ್ಲದಂತಾಗಿದೆ.


ಒತ್ತುವರಿಯಿಂದಲೇ ಸಂಕಷ್ಟ
ನಗರಕ್ಕೆ ಹೊಂದಿಕೊಂಡಿರುವ ಅಂಬಾಜಿದುರ್ಗ ಬೆಟ್ಟದ ಕಾಡುಮಲ್ಲೇಶ್ವರ ಬೆಟ್ಟದ ತಪ್ಪಲಿನಿಂದ ಹರಿದು ಬರುತ್ತಿದ್ದ ನೀರು ರಾಜಕಾಲುವೆ ಒತ್ತುವರಿ ಮಾಡಿದ ಪರಿಣಾಮ ರಾತ್ರಿ ಬಿದ್ದ ಮಳೆಯಿಂದ ನಗರದ ಅಂಜನಿ ಬಡಾವಣೆಯ ಮುಖ್ಯರಸ್ತೆಯಲ್ಲಿ ನಿಂತು, ಮನೆಗಳಿಗೆ ನುಗ್ಗಿ ನಿವಾಸಿಗಳು ಹೈರಾಣರಾದರು. ಅದೇ ರಾಜಕಾಲುವೆ ಒತ್ತುವರಿಯಾದ ಪರಿಣಾಮ ನಗರದ ರಾಷ್ಟ್ರೀಯ ಹೆದ್ದಾರಿ-234ರ ರಸ್ತೆಯಾದ ಎಂ.ಜಿ. ರಸ್ತೆಯ ಬೊಂಬು ಬಜಾರ್ ರಸ್ತೆಯಿಂದ ಚೇಳೂರು ವೃತ್ತದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಮಳೆನೀರು ನಿಂತು ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net