

ಬಿಡದಿ: ಕೆಂಪದ್ಯಾಪನಹಳ್ಳಿ& ಕಾಕರಾಮನಹಳ್ಳಿ ಮಾರ್ಗದ ರಸ್ತೆ ಸಂಪೂರ್ಣ ಹದಗೆಟ್ಟು, ವಾಹನ ಸವಾರರು ಜೀವ ಭಯದಲ್ಲೇ ನಿತ್ಯ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಕರಾಮನಹಳ್ಳಿಯಿಂದ ಕೆಂಪದ್ಯಾಪನಹಳ್ಳಿವರೆಗೆ ಸುಮಾರು 5 ಕಿಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕಿತ್ತು ಹಾಗೆ ಬಿಟ್ಟಿದ್ದು, ಕಾಮಗಾರಿ ಪ್ರಾರಂಭವಾಗಿ ತಿಂಗಳೇ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಕೆಲಸ ಪ್ರಾರಂಭವಾಗಿ 6&7 ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಗುಂಡಿಗಳನ್ನು ಅಗೆದು ಕೆಲವು ಕಡೆ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ಒಂದು ಕಡೆ ಗುಂಡಿ ಮತ್ತೊಂದೆಡೆ ಧೂಳಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಕೆಸರು ಗದ್ದೆಯಾದ ರಸ್ತೆ
ಇನ್ನು ಹಲವು ಕಡೆ ಮಣ್ಣು ಅಗೆದು ಹಾಗೆ ಬಿಟ್ಟಿರುವ ಕಾರಣ ಗುಂಡಿಗಳಾಗಿ ಮಾರ್ಪಟ್ಟಿವೆ. ಮಳೆ ಬರುತ್ತಿರುವ ಕಾರಣ ಗುಂಡಿಗಳಲ್ಲಿ ನೀರು ತುಂಬಿ ರಸ್ತೆ ಯಾವುದು?. ಗುಂಡಿ ಯಾವುದು? ಎನ್ನುವ ಸ್ಥಿತಿ ಇದೆ. ಬೋರೆಹಳ್ಳಿ ಗ್ರಾಮದ ಮಧ್ಯ ಭಾಗದಲ್ಲೇ ರಸ್ತೆ ಹಾದು ಹೋಗಿದೆ. ಈ ಹಿಂದೆ ಇದ್ದ ಡಾಂಬರು ಕಿತ್ತು ಮೇಲೆ ಮಣ್ಣು ಹಾಕಿದ್ದು, ವಾಹನಗಳ ಸಂಚಾರದಿಂದ ಕೆಸರು ಗುಂಡಿಗಾಳಾಗಿ ಬದಲಾಗಿದೆ.
ಗುಂಡಿ ತಪ್ಪಿಸಲು ಹೋಗಿ ಅಪಘಾತ
ಕಾಮಗಾರಿ ಮುಗಿಯದ ಕಾರಣ ಅಪಘಾತಗಳೂ ಹೆಚ್ಚಾಗುತ್ತಿವೆ. ಗುಂಡಿಗಳನ್ನು ತಪ್ಪಿಸುವ ಧಾವಂತದಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಹಲವು ಪ್ರಕರಣ ಸಾಮಾನ್ಯವಾಗಿವೆ.
ಮಂಚನಬಲೆಗೆ ಸಂಪರ್ಕಿಸುವ ರಸ್ತೆ
ಪ್ರವಾಸಿ ತಾಣವಾದ ವಂಚನಬಲೆ ಜಲಾಶಯಕ್ಕೆ ಹೋಗಲು ಪ್ರವಾಸಿಗರು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಬೆಂಗಳೂರಿನಿಂದ ಬರುವ ಪ್ರವಾಸಿಗರು ಬಿಡದಿಗೆ ಬಂದು ಅಲ್ಲಿಂದ ಇದೇ ರಸ್ತೆಯಲ್ಲಿ ಮಂಚನಬಲೆ ಹಾಗೂ ಮಾಗಡಿಗೆ ಹೋಗುತ್ತಾರೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಕಾಮಗಾರಿ ನಡೆಸಲಾಗುತ್ತಿದೆ. ಇದರ ಜತೆಗೆ ಚಿಕ್ಕನಹಳ್ಳಿ, ಗಾಣಕಲ್ಲು, ಚಂದ್ರಪ್ಪ ಸರ್ಕಲ್ಗೆ ಕೂಡ ಈ ರಸ್ತೆ ಸಂಪರ್ಕ ಕಲ್ಪಿಸಲಿದೆ.
ರಸ್ತೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 5 ಕಿಮೀ ರಸ್ತೆಯನ್ನು ಅಗೆದು ಹಾಗೆ ಬಿಡಲಾಗಿದೆ. ಇದರಿಂದ ವಾಹನ ಸವಾರರು ಹಾಗೂ ರಸ್ತೆಯ ಪಕ್ಕದಲ್ಲಿನ ಗ್ರಾಮಗಳ ಜನರಿಗೆ ಕಿರಿಕಿರಿ ಉಂಟಾಗುತ್ತಿದೆ. ಕೆಲವು ಕಡೆ ಗುಂಡಿಗಳನ್ನು ಅಗೆದು ಹಾಗೇ ಬಿಟ್ಟಿದ್ದಾರೆ. ಇನ್ನೂ ಕೆಲವು ಕಡೆ ಜೆಲ್ಲಿ ಹಾಕಿ ಬಿಟ್ಟಿದ್ದು ಒಂದು ಲಾರಿ ಹೋದರೆ ಸಾಕು, ಧೂಳು ಮನೆಗಳಿಗೆ ತುಂಬಿಕೊಳ್ಳುತ್ತಿದೆ. ಇದರಿಂದ ಜನರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ಸಂಬಂಧಿಸಿದ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ಗೆ ಕರೆ ಮಾಡಿದರೆ ಪೋನ್ ಕರೆ ಸ್ವೀಕರಿಸುವುದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ರಸ್ತೆ ದುರಸ್ತಿ ಸರಿಪಡಿಸಬೇಕು.
> ಬಸವರಾಜು
ಗಾಣಕಲ್ ಗ್ರಾಮಸ್ಥ