ಗುಡಿಸಿದಾಗಲೇ ಗುಂಡಿ ತೇಪೆ ಬಯಲು

20250926_115312
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜಧಾನಿಯಲ್ಲಿ ಕೆಲ ದಿನಗಳಿಂದ ರಸ್ತೆ ಗುಂಡಿಗಳೇ ಸದ್ದು ಮಾಡುತ್ತಿದ್ದು, ನಗರ ಪಾಲಿಕೆಗಳು ಗುಂಡಿ ಮುಚ್ಚುವ ಕಾಯಕಕ್ಕೆ ಕೈ ಹಾಕಿದ್ದರೂ ಕೆಲವು ಕಡೆ ಹರಕೆ ಸಂದಾಯದಂತೆ ಕೆಲಸಗಳು ನಡೆಯುತ್ತಿವೆ. ತೇಪೆ ಕಾಮಗಾರಿಯಾದರೂ ಗುಣಮಟ್ಟವನ್ನು ನೋಡಬೇಕಿರುವುದು ಅಧಿಕಾರಿಗಳ ಕರ್ತವ್ಯ. ಆದರೆ, ಇದನ್ನು ಮರೆತು ಅಧಿಕಾರಿಗಳು ಎಸಿ ರೂಂಗಳಲ್ಲೇ ಕುಳಿತಿರುವುದು ವಿಪರ್ಯಾಸವೇ ಸರಿ.

ಗಿರಿನಗರದ 60 ಅಡಿ ನೆಹರು ರಸ್ತೆ ಹಾಗೂ 80 ಅಡಿ ಜೆಪಿ ರಸ್ತೆಯಲ್ಲಿ ಅಲ್ಲಲ್ಲಿ ಪ್ಯಾಚ್​ವರ್ಕ್​ ನಡೆದಿದ್ದು, ಇಲ್ಲಿನ ಕೆಲವು ಅಡ್ಡರಸ್ತೆಗಳು ಸಂಪೂರ್ಣ ಕಾಯಕಲ್ಪ ಸಿಗಬೇಕೆಂಬ ಸ್ಥಿತಿಯಲ್ಲಿದೆ. ಆದರೂ ಅಂತಹ ರಸ್ತೆಗಳನ್ನು ರ್ನಿಲಸಿ ಪ್ರಮುಖ ರಸ್ತೆಗಳನ್ನೇ ಮುಚ್ಚುತ್ತಾ ಹೋದರೂ, ಆ ತೇಪೆಗಳು ಮೂರೇ ದಿನಕ್ಕೆ ಗುಡಿಸಿ ಹೋಗುವ ಹಂತದಲ್ಲಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಇದು ಗಿರಿನಗರವೊಂದರ ಸಮಸ್ಯೆಯಲ್ಲ, ರಾಜಧಾನಿಯ ಪ್ರಮುಖ ಪ್ರದೇಶಗಳ ಕಥೆ ಮತ್ತು ವ್ಯಥೆ ಎಂದು ಸಾರ್ವಜನಿಕರು ದೂರಿದ್ದಾರೆ.

ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ 702 ಕಿ.ಮೀ. ಆರ್ಟಿರಿಯಲ್​ ಹಾಗೂ 946 ಕಿ.ಮೀ. ಸಬ್​ ಆರ್ಟಿರಿಯಲ್​ ರಸ್ತೆಗಳು ಸೇರಿ ಒಟ್ಟು 1,648 ಕಿ.ಮೀ. ಪ್ರಮುಖ ರಸ್ತೆಗಳಿವೆ. ನಗರದಾದ್ಯಂತ ಬಿದ್ದಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದ ಬೆನ್ನಲ್ಲೇ ಅಧಿಕಾರಿಗಳು ನೂತನ ಪಾಲಿಕೆಯ ಪರಿದಿಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಬಗೆಹರಿಸಲು ನವೆಂಬರ್​ ತನಕ ಸರ್ಕಾರ ಅಂತಿಮ ಗಡುವು ನೀಡಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರು ಪ್ರಾರಂಭಿಸಿದ್ದಾರೆ. ಆದರೆ ಕೆಲವು ಕಡೆ ತುರಾತುರಿಯಲ್ಲಿ ಕೆಲಸಗಳು ನಡೆದಿದ್ದು, ಗಡುವು ಮುಗಿಯುವವರೆಗಾದರೂ ತೇಪೆ ನಿಲ್ಲುತ್ತದೋ ಅಥವಾ ಅದಕ್ಕಿಂತ ಮೊದಲೇ ದೊಡ್ಡ ಗುಂಡಿ ಮತ್ತೆ ಉಂಟಾಗುತ್ತದೋ ಎಂಬಂತೆ ಕಾಮಗಾರಿ ನಡೆದಿದೆ.

ಅವಡಗಳ ಸಾಧ್ಯತೆ

ತೇಪೆಯಿಂದ ಏಳುವ ಜಲ್ಲಿಕಲ್ಲುಗಳು ರಸ್ತೆಯಲ್ಲಿ ಚದುರಿ ಬಿದ್ದಿರುವುದರಿಂದ ದ್ವಿಚಕ್ರ ವಾಹನದಲ್ಲಿ ಬರುವವರಿಗೆ ಕಂಟಕವಾಗಿದೆ. ವಾಹನಗಳು ಸ್ಕಿಡ್​ ಆಗಿ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿದೆ. ಕೆಲವೊಮ್ಮೆ ತೇಪೆಯನ್ನು ಉಬ್ಬಿಕೊಂಡಿರುವ ರೀತಿ ಹಾಕಿದಾಗಲೂ ವಾಹನ ಸವಾರರಿಗೆ ತೊಡಕಾಗುವ ಸಾಧ್ಯತೆಗಳಿವೆ. ರಸ್ತೆ ಗುಂಡಿ ಮುಚ್ಚಿದ ಭಾಗ ಹಂಪ್​ ರೀತಿಯಲ್ಲಿದ್ದರೆ, ವೇಗವಾಗಿ ಬರುವ ಗಾಡಿಗಳು ದಿಢೀರನೆ ಉಬ್ಬಿನ ಭಾಗವನ್ನು ಗಮನಿಸದೆ ಅವಡಗಳಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net